ಮೂರು ಕೋಟಿ ಶಿವಲಿಂಗ ಸ್ಥಾಪನೆಗೆ ಭೂಮಿಪೂಜೆ

mukti mandir
Published on

ಲಕ್ಷ್ಮೇಶ್ವರ: ಪರಮತಪಸ್ವಿ ಲಿಂ.ಶ್ರೀ ವೀರಗಂಗಾಧರ ಜಗದ್ಗುರುಗಳು ಲೋಕ ಕಲ್ಯಾಣಕ್ಕಾಗಿ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನೆಯಾಗಬೇಕು ಎಂದು ಅಪೇಕ್ಷಿಸಿದ್ದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ ಭೂಮಿಪೂಜೆ, ಹೋಮ-ಹವನ, ಧರ್ಮಸಭೆಗಳು ಬುಧವಾರ ಶ್ರೀ ಕ್ಷೇತ್ರದಲ್ಲಿ ವಿಧ್ಯುಕ್ತವಾಗಿ ನೆರವೇರಿದವು.

ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ನೊಣವಿನಕೇರಿ ಕಾಡಸಿದ್ಧೇಶ್ವರಮಠದ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಈ ಪವಿತ್ರ ಕ್ಷೇತ್ರ ದರ್ಶನದಿಂದ ಭಕ್ತರ ಕಷ್ಟ ಕಾರ್ಪಣ್ಯ, ಪಾಪ ಕರ್ಮಗಳು ಕಳೆದು ಶಾಂತಿ, ನೆಮ್ಮದಿ, ಸಮೃದ್ಧಿ, ಪುಣ್ಯ ಪ್ರಾಪ್ತಿಯಾಗಬೇಕೆಂಬ ಲಿಂ.ಶ್ರೀ ವೀರಗಂಗಾಧರ ಜಗದ್ಗುರುಗಳ ಸತ್ಯಸಂಕಲ್ಪ ನಿರ್ವಿಘ್ನವಾಗಿ ವರ್ಷದೊಳಗೆ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.

‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ವಿಶ್ವಮಾನವ ಸಂದೇಶ ಸಾರಿದ ಜಗದ್ಗುರುಗಳು ಮಾನವ ಕುಲಂ ತಾನೊಂದೆ ವಲಂ ಎಂಬಂತೆ ಕ್ಷೇತ್ರದಲ್ಲಿ ಸರ್ವ ಧರ್ಮ ಸಂಸ್ಥಾಪಕರ ಮೂರ್ತಿ ಪ್ರತಿಷ್ಠಾಪಿಸಿ ಸಮನ್ವಯತೆಗೆ ಸಾಕ್ಷಿಯಾಗಿದ್ದಾರೆ. ಪ್ರಸ್ತುತ ರಾಜ್ಯ, ರಾಷ್ಟ್ರದಲ್ಲಿ ಉಂಟಾಗಿರುವ ಜಾತಿ, ಧರ್ಮಗಳ ನಡುವಿನ ಸಂಘರ್ಷದ ಇತಿಶ್ರೀಗೆ ಲಿಂ.ಜಗದ್ಗುರುಗಳ ಶಾಂತಿ, ಸೌಹಾರ್ಧತೆಯ ಮಂತ್ರ ಸಮಾಜಕ್ಕೆ ಸಂದೇಶವಾಗಲಿದೆ’ ಎಂದರು.

ಹತ್ತಾರು ವರ್ಷಗಳಿಂದ 5 ಸಾವಿರ ಶಿವಲಿಂಗ ಸಂಗ್ರಹಕ್ಕಾಗಿ ಕ್ಷೇತ್ರದ ಪಟ್ಟಾಧ್ಯಕ್ಷರು ಶ್ರಮಿಸಿದ್ದಾರೆ. ಜಗದ್ಗುರುಗಳ ಪ್ರೇರಣೆಯಿಂದ ಲಿಂಗ ಪ್ರತಿಷ್ಠಾಪನೆಗೆ ಶ್ರೀಮಠದ ಪರಮಭಕ್ತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಹಾಯ-ಸಹಕಾರ ನೀಡಿದ್ದಾರೆ. ಜತೆಗೆ ಅನೇಕ ಮಂತ್ರಿಗಳು, ರಾಜಕಾರಣಿಗಳು, ಈ ಭಾಗದ ಹಿರಿಯರು, ಶ್ರೀಮಠದ ಭಕ್ತರು ತನುಮನಧನದ ಸಹಾಯ ಸಹಕಾರ ನೀಡಿದ್ದಾರೆ ಎಂದರು.

ನೇತೃತ್ವ ವಹಿಸಿದ್ದ ವಿಮಲ ರೇಣುಕ ವೀರಮುಕ್ತಿಮುನಿ ಶ್ರೀಗಳು ಮಾತನಾಡಿ, ‘ಲಿಂ. ವೀರಗಂಗಾಧರ ಜಗದ್ಗುರುಗಳ ವೀರಸಂಕಲ್ಪ ಸಾಕಾರಗೊಳ್ಳುತ್ತಿರುವುದು ನಾಡಿನ ಭಕ್ತರಿಗೆ ಹರ್ಷ ತಂದಿದೆ. ಹಿರಿಯ ಶ್ರೀಗಳೆಲ್ಲರ ಆಶೀರ್ವಾದ, ಭಕ್ತರ ಸಹಾಯ-ಸಹಕಾರದಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾಯಾ ವಾಚಾ ಮನಸಾ ಶ್ರಮಿಸುತ್ತೇವೆ. ಉದ್ದೇಶಿತ ಕಾರ್ಯದ ಉಸ್ತುವಾರಿಯನ್ನು ರಾಜ್ಯದ ಪ್ರಮುಖ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ತೆಗೆದುಕೊಂಡಿದ್ದಾರೆ. ಮುಂದಿನ ವರ್ಷ ಇದೇ ವೇಳೆ ತ್ರಿಕೋಟಿ ಲಿಂಗಗಳು ಸ್ಥಾಪನೆ ಲೋಕಾರ್ಪಣೆಯಾಗಬೇಕಿದೆ. ಭಕ್ತ ಸಮೂಹ ಈ ಅಭೂತಪೂರ್ವ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದರು.

ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾಚಾರ್ಯರು, ಗಂಜಿಗಟ್ಟಿಯ ಶಿವಲಿಂಗೇಶ್ವರ ಶಿವಾಚಾರ್ಯರು, ಬಂಕಾಪುರದ ಅರಳೆಲೆ ಹಿರೇಮಠದ ಚಂದ್ರಶೇಖರ ಶ್ರೀಗಳು, ಕಲಾದಗಿ ಗಂಗಾಧರ ಸ್ವಾಮೀಜಿ, ಮಳೆಮಲ್ಲಿಕಾರ್ಜುನ ಶ್ರೀಗಳು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಮಾಜಿ ಸಂಸದ ಮಂಜುನಾಥ ಕುನ್ನೂರ, ಶಾಸಕರಾದ ಜಿ.ಎಸ್ ಪಾಟೀಲ, ಶ್ರೀನಿವಾಸ ಮಾನೆ, ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ, ಜಿ.ಎಂ.ಮಹಾಂತಶೆಟ್ಟರ, ಆನಂದ ಗಡ್ಡದೇವರಮಠ, ಇಂಜಿನಿಯರಗಳಾದ ದಯಾನಂದ, ಅರವಿಂದ, ನಿರಾವರಿ ಇಲಾಖೆ ನಿರ್ದೇಶಕ ಮಲ್ಲಿಕಾರ್ಜುನ ಜಿ, ಸುರೇಶ ಬಾಬು, ಸಂಗಮ, ಚಿದಾನಂದ, ಶಿವನಗೌಡ ಪಾಟೀಲ, ತಮಿಳುನಾಡಿನ ವಾಸ್ತುಶಿಲ್ಪಿ ವರದರಾಜ್, ಹಾಲಸ್ವಾಮಿ, ನೂಲ್ವಿಯ ಶಂಕರಗೌಡ ಶಿದ್ದನಗೌಡ್ರ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಗಣ್ಯರು, ಹಿರಿಯರು, ದಾನಿಗಳು, ಗದಗ, ಹಾವೇರಿ, ಧಾರವಾಡ ಜಿಲ್ಲೆಯ ಭಕ್ತರು ಪಾಲ್ಗೊಂಡಿದ್ದರು. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ಪ್ರತಿಷ್ಠಾಪನೆಯಾಗುವ ಪ್ರತಿ ಶಿವಲಿಂಗದ ಮೇಲೆ ಬಸವಣ್ಣನ ಮೂರ್ತಿಯ ಬಾಯಿಯಿಂದ ಜಲಾಭಿಷೇಕವಾಗಿ ಅದು ಅತ್ಯಂತ ವ್ಯವಸ್ಥಿತವಾಗಿ ಒಂದೆಡೆ ಸಂಗ್ರಹಗೊಂಡು ತ್ರಿಕೋಟೇಶ್ವರ ತೀರ್ಥಸ್ಥಾನವಾಗಲಿದೆ. ಸಾಗರೋಪಾದಿಯಲ್ಲಿ ಹರಿದು ಬರುವ ಭಕ್ತರಿಗೆ ನಿತ್ಯ ಪ್ರಸಾದ ಸೇವೆ, ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ. ಸೂರ್ಯ-ಚಂದ್ರರಿರುವವರೆಗೂ ಈ ಕ್ಷೇತ್ರ ಜಾಗತಿಕ ಧರ್ಮಕ್ಷೇತ್ರವಾಗಲಿದೆ.ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net