

ರಟ್ಟಿಹಳ್ಳಿ: ಪಟ್ಟಣದ ವೀರೈಶವ ರುದ್ರಭೂಮಿಯಲ್ಲಿ ವಿಶ್ರಾಂತಿ ಧಾಮ (ನೆರಳಿನ ಶೆಡ್) ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.
ಪಟ್ಟಣದ ಸಣ್ಣಗುಬ್ಬಿ ಗ್ರಾಮದ ರಸ್ತೆಯಲ್ಲಿರುವ ಹಿಂದು ವೀರಶೈವ ರುದ್ರಭೂಮಿಯು ಸುಮಾರು 3 ಎಕರೆ ಪ್ರದೇಶ ಒಳಗೊಂಡಿದ್ದು, ಮೂಲಸೌಕರ್ಯಗಳಿರಲಿಲ್ಲ. ಅಂತ್ಯ ಸಂಸ್ಕಾರಕ್ಕೆ ದೂರದೂರಿನಿಂದ ಬರುವವರು ತೊಂದರೆ ಅನುಭವಿಸುವಂತಾಗಿತ್ತು.
ಇದನ್ನು ಮನಗಂಡಿದ್ದ ಪಟ್ಟಣದ ನಿಂಗನಗೌಡ್ರ ಪ್ಯಾಟಿಗೌಡ್ರ ಕುಟುಂಬಸ್ಥರು ದಿ. ಪಾರ್ವತಮ್ಮ ಕೋಂ ದಿ.ನಾಗನಗೌಡ ಗುಡ್ಡನಗೌಡ ಪ್ಯಾಟಿಗೌಡ್ರ ಸ್ಮರಣಾರ್ಥ ಅಂದಾಜು 3 ಲಕ್ಷ ರೂಪಾಯಿ ವೆಚ್ಚದಲ್ಲಿ ವಿಶ್ರಾಂತಿ ಧಾಮ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪಟ್ಟಣದ ನಮ್ಮೂರು ನಮ್ಮವರು ಸ್ನೇಹ ಬಳಗ ಸಹಕಾರದೊಂದಿಗೆ ಭೂಮಿಪೂಜೆ ನೆರವೇರಿಸಿದರು.
ಜಿಪಂ ಮಾಜಿ ಸದಸ್ಯ ಪಿ.ಡಿ. ಬಸನಗೌಡ್ರ, ವೀರನಗೌಡ್ರ ಪ್ಯಾಟಿಗೌಡ್ರ, ವೀರಣ್ಣ ತೊಗರ್ಸಿ, ಸುರೇಶ ಬೆಣ್ಣಿ, ರಾಘವೇಂದ್ರ ಹರವಿಶೆಟ್ಟರ್, ಕೆ.ವೈ. ಬಾಜೀರಾಯರ್, ಅಶೋಕ ದ್ಯಾವಕ್ಕಳವರ, ನಿರಂಜನ ಕಬ್ಬಿಣಕಂತಿಮಠ, ಮಾಲತೇಶ ಬೆಳಕೇರಿ, ಷಣ್ಮುಖ ಪ್ಯಾಟಿಗೌಡ್ರ, ಗಿರೀಶ ವಾಲಿ, ಲಿಂಗರಾಜ ವಾಲಿ, ಮಹೇಶ ಕೆರೂರು, ಮಾಲತೇಶ ಬೆಣ್ಣಿ, ಉಪಸ್ಥಿತರಿದ್ದರು.
ರುದ್ರಭೂಮಿಗೆ ಅವಶ್ಯವಿರುವ ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ವರ್ತಕ ಶಂಭಣ್ಣ ಗೂಳಪ್ಪನವರ ಅವರು ಬೋರ್‌ವೆಲ್ ವ್ಯವಸ್ಥೆ ಮಾಡುವುದಾಗಿ ಹೇಳಿದರು.