ನಾಳೆ ಸೇವಾಭಾರತಿ ಕಟ್ಟಡಕ್ಕೆ ಭೂಮಿಪೂಜೆ : 20ನೇ ವರ್ಷಗಳಿಂದ ಸಮಾಜ ಸೇವಾ ಕಾರ್ಯಗಳು

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸೇವಾಭಾರತಿ ಕನ್ಯಾಡಿ ಕಳೆದ 20 ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಶಿಕ್ಷಣ, ಕೃಷಿ, ಮಹಿಳಾ ಸ್ವಾವಲಂಬನ, ಸಂಸ್ಕಾರ, ಆರೋಗ್ಯ, ಜ್ಞಾನಭಾರತಿ, ಯಕ್ಷಾಭಾರತಿ, ನಿರ್ಮಲಭಾರತಿ, ದಿವ್ಯಾಂಗರ ಕ್ಷೇತ್ರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ವೇತನ ಒದಗಿಸುವ ಕಾರ್ಯ ಸಂಸ್ಥೆಯಿಂದ ನಿರಂತರವಾಗಿ ನಡೆಸುತ್ತಿದೆ. ನ.14ರಂದು ಕನ್ಯಾಡಿ ಸೇವಾ ನಿಕೇತನದಲ್ಲಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನಡೆಯಲಿದೆ ಎಂದು ಸಂಸ್ಥೆಯ ಖಜಾಂಚಿ ಕೆ.ವಿನಾಯಕ ರಾವ್ ಹೇಳಿದರು.

ಬೆಳ್ತಂಗಡಿ ಸುವರ್ಣ ಆರ್ಕೆಡ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು, ಹಾಸನ 6 ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡಂತೆ ಬೆನ್ನುಹುರಿ ಅಪಘಾತಕ್ಕೊಳಗಾಗಿ ಸೊಂಟದ ಕೆಳಭಾಗ ಸ್ಪಶರ್ಜ್ಞಾನ, ನಿಯಂತ್ರಣ ಕಳೆದುಕೊಂಡವರಿಗಾಗಿ ಕೊಕ್ಕಡದ ಸೌತಡ್ಕದಲ್ಲಿ ಸೇವಾಧಾಮ ಎಂಬ ಹೆಸರಿನ ಪುನಶ್ಚೇತನ ಕೇಂದ್ರ ಪ್ರಾರಂಭಿಸಿದ್ದು, ಈಗಾಗಲೇ 688 ಬೆನ್ನು ಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಲಾಗಿದ್ದು, ಕೇಂದ್ರದ ಮುಖಾಂತರ ಸುಮಾರು 220 ಮಂದಿ ಪುನಶ್ವೇತನ ಪಡೆದುಕೊಂಡಿದ್ದಾರೆ ಎಂದರು.

ಬೆನ್ನುಹುರಿ ಅಪಘಾತಕ್ಕೊಳಗಾದವರು ಸಮುದಾಯದಿಂದ ದೂರ ಉಳಿಯುವುದು ಮಾನಸಿಕ ಖಿನ್ನತೆ ಮುಂತಾದ ಸಮಸ್ಯೆಗಳಿಗೆ ಒಳಗಾಗಿರುತ್ತಾರೆ. ಇಂಥವರಿಗೆ ಫಿಸಿಯೋಥೆರಪಿ, ಅಕ್ಯೂಪೇಶನಲ್ ಥೆರಪಿ, ಜೀವನ ಕೌಶಲ,ವೈದ್ಯಕೀಯ ಸೌಲಭ್ಯ_ ನೀಡಿ ಮತ್ತೆ ಸಮಾಜಕ್ಕೆ ತರುವ ಪ್ರಯತ್ನ ಸಂಸ್ಥೆಯಿಂದ ನಡೆಯುತ್ತಿದೆ ಎಂದು ತಿಳಿಸಿದರು.

ಅಂಗವಿಕಲರಿಗೆ ನೆರವು

ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಒಟ್ಟು 26 ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ, ಜಾಗೃತಿ ಶಿಬಿರ, 465 ಸಾಧನ ಸಲಕರಣೆಗಳು, 113 ಮಂದಿಗೆ ಸ್ವಉದ್ಯೋಗಕ್ಕೆ ನೆರವು, ಆರೋಗ್ಯ ಯೋಜನೆಯಡಿಯಲ್ಲಿ 98 ಶಿಬಿರ ನಡೆಸಿ 10ಸಾವಿರಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹ, 329 ಉಚಿತ ಮತ್ತು ರಿಯಾಯಿತಿ ದರದಲ್ಲಿ ಆಂಬುಲೆನ್ಸ್ ಸೇವೆ, ಸಬಲಿನಿ ಯೋಜನೆಯಡಿಯಲ್ಲಿ 29 ಟೈಲರಿಂಗ್ ಶಿಬಿರ ನಡೆಸಿ 650ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಹೀಗೆ ಹಲವಾರು ಚಟುವಟಿಕೆಗಳನ್ನು ನಡೆಸಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net