

ಶ್ರೀರಂಗಪಟ್ಟಣ: ಪಾರಂಪರಿಕ ಶ್ರೀರಂಗಪಟ್ಟಣವನ್ನು ಪ್ರವಾಸೋದ್ಯಮದಲ್ಲಿ ಮೇಲ್ದರ್ಜೆಗೇರಿಸಲು ಹಂತ ಹಂತವಾಗಿ ಸಾಕಷ್ಟು ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಪಟ್ಟಣ ಸಮೀಪದ ಪಶ್ಚಿಮವಾಹಿನಿಯಲ್ಲಿ ಮಂಗಳವಾರ 1.5 ಕೋಟಿ ರೂ. ವೆಚ್ಚದಲ್ಲಿ ಚಂದ್ರವನದ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಶ್ರೀರಂಗಪಟ್ಟಣ ಪ್ರಾಕೃತಿಕ, ಪೌರಾಣಿಕ ಹಾಗೂ ಪಾರಂಪರಿಕತೆ ನೆಲೆಯಾಗಿದೆ. ಈ ಹಿಂದೆಯೇ ಇದರ ಅಭಿವೃದ್ಧಿಗೆ ಸಾಕಷ್ಟು ಯೋಜನೆ ರೂಪಿಸಿದ್ದು, ಅವುಗಳ ಈಡೇರಿಕೆಗೆ ಈಗ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೆರವಾಗಿದ್ದಾರೆ. ಶ್ರೀರಂಗಪಟ್ಟಣವನ್ನು ಮಾದರಿಯನ್ನಾಗಿಸಲು ಹಂತ ಹಂತವಾಗಿ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಯುವ ನಿಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಯುವ ಪದವೀಧರರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರೈತರ ಕಷ್ಟಗಳಿಗೆ ಸ್ಪಂದಿಸುವ ಮನಸ್ಥಿತಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿ ಇನ್ಯಾರಿಗೂ ಇಲ್ಲ. ಪ್ರಸ್ತುತ ಕನ್ನಂಬಾಡಿ ಜಲಾಶಯದಲ್ಲಿ ನೀರಿಲ್ಲವಾದ ಕಾರಣ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ಕಾವೇರಿ ಕೊಳ್ಳದ ನಾಲೆಗಳಿಗೆ ನೀರು ಹರಿಸುವ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದರು.
ಪುರಸಭೆ ಸದಸ್ಯರಾದ ಎಂ.ಎಲ್.ದಿನೇಶ್, ಎಸ್.ಎನ್.ದಯಾನಂದ್, ಮಂಡ್ಯ ಮುದ್ರಾಣಾಲಯ ಜಿಲ್ಲಾ ನಿರ್ದೇಶಕ ಸೋಮಸುಂದರ್, ಪುರಸಭಾ ಮಾಜಿ ಸದಸ್ಯ ಬಾಲಕೃಷ್ಣ, ರಜನಿಕಾಂತ್, ಎಇಇ ಎಂ.ಎಸ್.ಜಸ್ವಂತ್, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಸುನೀಲ್, ಪ್ರಥಮ ದರ್ಜೆ ಸಹಾಯಕ ಮುದ್ದೇಗೌಡ, ಕಿರಿಯ ಇಂಜಿನಿಯರ್ ಸಿಂಚನಾ ಮತ್ತು ಹೇಮಲತಾ ಉಪಸ್ಥಿತರಿದ್ದರು.