

ಮಡಿಕೇರಿ: ಹೆಬ್ಬಾಲೆ ಸಮೀಪದ ಹಳಕೋಟೆ ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು ಹೈನುಗಾರಿಕೆ ಸಹಕಾರಿಯಾಗುತ್ತದೆ. ಹೈನುಗಾರಿಕೆಯಿಂದ ಬಡ ಕುಟುಂಬಗಳು ನೆಮ್ಮದಿಯಾಗಿ ಜೀವನ ಸಾಗಿಸಲು ಸಾಧ್ಯ. ಈಗಾಗಲೇ ಪ್ರತಿ ಹಳ್ಳಿಗಳಲ್ಲಿಯೂ ಜನರು ಕೃಷಿಯಿಂದ ಹೈನುಗಾರಿಕೆಯಿಂದ ಸಾಕಷ್ಟು ಲಾಭ ಪಡೆದು ಉತ್ತಮವಾದ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಲಾಭದಾಯಕವಾದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಜತೆಗೆ ಸರ್ಕಾರ ಇಂತಹ ಯೋಜನೆಗಳಿಗೆ ಅನುದಾನವನ್ನು ಹೆಚ್ಚಾಗಿ ಬಿಡುಗಡೆ ಮಾಡಿದ್ದಲ್ಲಿ ಜನರಿಗೆ ಇನ್ನಷ್ಟು ಸಹಕಾರಿಯಾಗುತ್ತದೆ ಎಂದರು.
ಜನಪ್ರತಿನಿಧಿಗಳು ಪ್ರತಿ ಹಳ್ಳಿಯ ವಾಸ್ತವ್ಯವನ್ನು ಅರ್ಥ ಮಾಡಿಕೊಂಡು ಹಳ್ಳಿಗಳಿಗೆ ಬೇಕಾದ ಸೌಲತ್ತುಗಳನ್ನು ಒದಗಿಸಿ ಕೊಡಬೇಕು. ಇದರಿಂದ ಜನರು ನೆಮ್ಮದಿಯಾಗಿ ಜೀವನ ಸಾಗಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಾಪಂಡ ಮುತ್ತಪ್ಪ ದಂಪತಿ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿ ಉತ್ತಮ ರೀತಿಯಲ್ಲಿ ನಡೆಯಲಿ ನಮ್ಮ ಸಹಕಾರ ಸದಾ ನಿಮಗಿದೆ ಎಂದು ಶುಭ ಹಾರೈಸಿದರು.
ಸಿವಿಲ್ ಇಂಜಿನಿಯರ್ ಆರ್.ಆರ್.ಕುಮಾರ್ ಮಾತನಾಡಿ, ನಾಪಂಡ ಮುತ್ತಪ್ಪನವರ ಕೊಡುಗೆ ನಮ್ಮ ಜಿಲ್ಲೆಗೆ ಅಪಾರವಾಗಿದೆ. ಸಾಕಷ್ಟು ದೇವಸ್ಥಾನಗಳಿಗೆ, ಬಡವರಿಗೆ ನೆರವಾಗಿದ್ದಾರೆ. ಅಪಾರ ಅಭಿವೃದ್ಧಿ ಕನಸುಗಳನ್ನು ಕಂಡಿರುವ ಇಂತಹ ದಾನಿಗಳು ಮುಂದಿನ ದಿನಗಳಲ್ಲಿ ನಮಗೆ ಶಾಸಕರಾಗಿ ದೊರಕಿದ್ದಲ್ಲಿ ನಮ್ಮ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ನಡೆಯುತ್ತದೆ. ಹಾಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಮುಂದಿನ ಚುನಾವಣೆಯಲ್ಲಿ ನಾಪಂಡ ಮುತ್ತಪ್ಪನವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ್, ಶಿರಂಗಾಲ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮಧುಸೂದನ್, ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಮಂಜುಳಾ ಸೇರಿದಂತೆ ಜೆಡಿಎಸ್ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.