

ವಿಜಯಪುರ: ಬಬಲೇಶ್ವರ ತಾಲೂಕಿನ ಮಮದಾಪುರ ಕೆರೆ ಪುನರುಜ್ಜೀವನ ಕಾಮಗಾರಿಗೆ ಜು. 29 ರಂದು ಬೆಳಗ್ಗೆ 10.30ಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಭೂಮಿ ಪೂಜೆ ಸಲ್ಲಿಸಲಿದ್ದಾರೆ.
ಹಿಂದುಸ್ತಾನ ಕೋಕಾ ಕೋಲಾ ಬೆವೆರಜಿಸ್ ಕಂಪನಿ ವತಿಯಿಂದ ಸಿಎಸ್‌ಆರ್ ಅನುದಾನದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಯೋಜನೆಯಡಿ ಬಾಂದಾರ್ ನಿರ್ಮಾಣ ಹಾಗೂ 800 ಮೀಟರ್ ಟ್ಯಾಂಕ್ ಬಾಂದಾರ್‌ಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಫೆನ್ಸಿಂಗ್ ಮತ್ತು ಹ್ಯಾಂಡ್ರೈಲ್‌ಗಳನ್ನು ಸ್ಥಾಪಿಸುವುದು, ಫುಟ್‌ಪಾತ್‌ಗಳನ್ನು ರಚಿಸುವುದು ಮತ್ತು ಮಕ್ಕಳ ಆಟದ ಪ್ರದೇಶವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಅಲ್ಲದೇ, ಸಿದ್ಧೇಶ್ವರ ಸ್ವಾಮೀಜಿ ಸ್ಮರಣಾರ್ಥ ಅರಣ್ಯೀಕರಣದ ಉಪಕ್ರಮವು ಕೆರೆಯ ಸುತ್ತಲಿನ 1,654 ಎಕರೆಗಳನ್ನು ಒಳಗೊಂಡಿದೆ. ಯೋಜನೆ ಪೂರ್ಣಗೊಂಡರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಲಿದೆ.
ಬಬಲೇಶ್ವರ ವಿಧಾನಸಭಾ ಕ್ಷೇತ್ರದ 25 ಸರ್ಕಾರಿ ಪ್ರೌಢ ಶಾಲೆಗಳಿಗೆ ಏಕಸ್ ಕಂಪನಿ ವತಿಯಿಂದ ಸಿಎಸ್‌ಆರ್ ಅನುದಾನದಿಂದ ನೀಡಿದ ಸ್ಮಾರ್ಟ್ ಕ್ಲಾಸ್ ಬೋರ್ಡ್‌ಗಳನ್ನು ನೀಡಿದ್ದು, ಬೆಳಗ್ಗೆ 11ಕ್ಕೆ ಮಮದಾಪುರ ಕೆಪಿಎಸ್ ಪ್ರೌಢಶಾಲೆಯಲ್ಲಿ ಉದ್ಘಾಟಿಸಲಾಗುವುದು.
ಮಮದಾಪುರ ವಿರಕ್ತಮಠದ ಪರಮ ಪೂಜ್ಯ ಅಭಿನವ ಮುರುಘೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಟಿ. ಭೂಬಾಲನ್, ಪೊಲೀಸ್ ವರಿಷ್ಠಾಧಿಕಾರಿ ಸೋನಾವಣೆ ಋಷಿಕೇಶ ಭಗವಾನ್, ಜಿಪಂ ಸಿಇಒ ರಿಷಿ ಆನಂದ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಹಿಂದುಸ್ತಾನ ಕೋಕಾ ಕೋಲಾ ಬೆವೆರೆಜಿಸ್ ಹಿಮಾಂಶು ಪ್ರೀಯದರ್ಶಿ, ಮುಕುಂದ ತ್ರಿವೇದಿ, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಗಂಗೂರ ಉಪಸ್ಥಿತರಿರುವರೆಂದು ಪ್ರಕಟಣೆ ತಿಳಿಸಿದೆ.