

ನಂಜನಗೂಡು ; ಸಣ್ಣ ನಿರಾವರಿ ಇಲಾಖೆಯ ಅನುದಾನದಡಿಯಲ್ಲಿ ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿಯ ಸ್ನಾನ ಘಟ್ಟದ ಬಳಿ ಹಾಗೂ ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಸೋಪಾನಕಟ್ಟೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಮಾಹಿತಿ ನೀಡಿದರು.
ಬುಧವಾರ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹುಲ್ಲಹಳ್ಳಿ ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದ ವೇಳೆ ಸಾರ್ವಜನಿಕರು ಕಪಿಲಾ ನದಿಗೆ ಸೋಪಾನಕಟ್ಟೆ ನಿರ್ಮಿಸಿಕೊಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ ಸಣ್ಣ ನಿರಾವರಿ ಇಲಾಖೆ ಸಚಿವ ಬೋಸರಾಜು ಅವರಲ್ಲಿ ಮನವಿ ಮಾಡಲಾಯಿತು. ಪರಿಣಾಮ 5 ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ಬಿಡುಗಡೆ ಮಾಡಿಕೊಟ್ಟಿದ್ದಾರೆ ಎಂದರು.
ಹುಲ್ಲಹಳ್ಳಿ ಗ್ರಾಮದಲ್ಲಿ ನಾಯಕ, ಪರಿಶಿಷ್ಟ ಜಾತಿ ಸಮುದಾಯಗಳ ಸ್ಮಶಾನಗಳನ್ನು ಹಾಗೂ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿ ಮಾಡಿಕೊಡುವಂತೆ ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ನಂಜನಗೂಡು ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 25 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಈ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ನಡೆಸಲಾಗುವುದು. ಜತೆಗೆ ಎಸ್‌ಇಪಿ, ಟಿಎಸ್‌ಪಿ ಅನುದಾನಗಳನ್ನು ಹೊರತುಪಡಿಸಿ 37 ಗ್ರಾಮಗಳಲ್ಲಿ ಸಾಮಾನ್ಯ ವರ್ಗದ ಬೀದಿಗಳಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಿಸಲು ಶೀಘ್ರದಲ್ಲೇ ಭೂಮಿಪೂಜೆಗಳನ್ನು ನೆರವೇರಿಸಲಾಗುವುದು ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಸದಸ್ಯರಾದ ಶ್ರೀಕಂಠಸ್ವಾಮಿ, ಗಾಯತ್ರಿ, ಪ್ರದೀಪ್, ಕೆ.ಎಂ.ಬಸವರಾಜು, ರವಿ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶ್ರೀಕಂಠನಾಯಕ, ಸಿ.ಎಂ.ಶಂಕರ್, ಜಿಪಂ ಮಾಜಿ ಸದಸ್ಯ ಕೆ.ಮಾರುತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್‌ರಾಜ್, ಚಾಮರಾಜು, ಮುಖಂಡರಾದ ಅನ್ಸರ್‌ಅಹಮದ್, ಶಿವನಂಜನಾಯಕ, ಎಂ.ಮಾದಪ್ಪ, ಪಾಪಣ್ಣ, ಎಲಚಗೆರೆ ಗೋವಿಂದರಾಜು, ನಾಗರಾಜಯ್ಯ, ಕಳಲೆರಾಜೇಶ್, ಎಂ.ಎನ್.ಮಂಜುನಾಥ್,ಅಯ್ಯಸ್ವಾಮಿ ದೇವಾಲಯದ ಗುರುಸ್ವಾಮಿ ಪಿ.ದೇವರಾಜು ಇತರರು ಇದ್ದರು.