

ಮಂಡ್ಯ: ಅಭಿವೃದ್ಧಿಯನ್ನು ಮ್ಯಾಜಿಕ್‌ನಿಂದ ಮಾಡಲು ಆಗುವುದಿಲ್ಲ. ಹಂತ ಹಂತವಾಗಿ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿಯೂ ಅಭಿವೃದ್ಧಿಗೆ ಕೆಲಸ ಮಾಡಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಚಿಕ್ಕಬಳ್ಳಿ ಗ್ರಾಮದಲ್ಲಿ 4,90 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದಲ್ಲಿರುವ ಕೆರೆಗೆ ಹೊಸದಾಗಿ ಕೋಡಿ ನಿರ್ಮಾಣ, ಚಿಕ್ಕಬಳ್ಳಿಯಿಂದ ಮಾಯಪ್ಪನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿ, ಅನಸೋಸಲು ಹತ್ತಿರದ ಪಿಕಪ್ ನಾಲೆ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ ಎಂದರು.
ಗ್ರಾಮದ ಅಭಿವೃದ್ದಿಗೆ ಕೋಟ್ಯಂತರ ರೂ ಅನುದಾನ ನೀಡಲಾಗಿದೆ. ದೇವಾಲಯ, ರಸ್ತೆ ನಿರ್ಮಾಣವಾಗಿದೆ. ಈಗ ಸಮುದಾಯ ಭವನ ಕೇಳಿದ್ದೀರಿ, ಅದನ್ನು ಮಾಡಲಾಗುವುದು. ನಮ್ಮೊಂದಿಗೆ ಇದ್ದು, ರಾಜಕೀಯವಾಗಿ ಶಕ್ತಿ ತುಂಬಿ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಹಕಾರ ನೀಡಿ. ಮುಂದಿನ ದಿನಗಳಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ದಿಯಾಗಲಿದೆ ಎಂದರು.
ಕೆರೆ ಅಭಿವೃದ್ದಿಗೆ 3 ಕೋಟಿ ರೂ ನೀಡಲಾಗಿದೆ. ಉಪವಿಭಾಗದ ನಾಲೆ ಪುನಶ್ಚೇತನಕ್ಕೆ 40 ಕೋಟಿ ರೂ ಯೋಜನೆ ಸಿದ್ಧವಾಗಿದೆ. ರೈತರಿಗೆ ಅನುಕೂಲವಾಗಲೆಂದು ನಾಲೆಗಳ ಅಭಿವೃದ್ದಿ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸರಾಳು ಹೋಬಳಿ ವ್ಯಾಪ್ತಿಯ ಅಭಿವೃದ್ದಿಗೆ 1 ಸಾವಿರ ಕೋಟಿ ರೂ ಅನುದಾನ ಕೊಟ್ಟಿದ್ದಾರೆ ಎಂದರು.
ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಖಂಡರಾದ ಪುಟ್ಟಸ್ವಾಮಿ, ಪಾಪಣ್ಣ, ಅಶೋಕ್, ಸಿ.ಎಂ.ದ್ಯಾವಪ್ಪ, ಎಂ.ಕೃಷ್ಣ, ಟಿ.ದೇವರಾಜು, ಉಮೇಶ್, ಕುಮಾರ್ ಇತರರಿದ್ದರು.