ಒಂದೊಂದು ಹನಿ ಹಾಲಿಗೂ ನ್ಯಾಯ ಕೊಡಿ

vijapyapura sababhavana
vijapyapura sababhavana
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಡೇರಿಯಲ್ಲಿ 84 ಮಂದಿ ಹಾಲು ಉತ್ಪಾದಕರಿದ್ದು, ಪ್ರತಿನಿತ್ಯ 1800 ಲೀಟರ್ ಹಾಲು ಸರಬರಾಜು ಮಾಡಲಾಗುತ್ತಿದೆ. ಉಳಿತಾಯ ಮಾಡಿರುವ ಹೆಚ್ಚುವರಿ ಅನುದಾನದಲ್ಲಿ 2 ಕೊಠಡಿಗಳುಳ್ಳ ಸಭಾಭವನ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮುಖಂಡ ಹಾರೋಹಳ್ಳಿ ರಘು ತಿಳಿಸಿದರು.
ಹೋಬಳಿಯ ಹಾರೋಹಳ್ಳಿಯ ಡೇರಿ ಕಟ್ಟಡ ಮೇಲೆ ಡೇರಿಯ 35 ಲಕ್ಷ ರೂ.ಗಳ ಉಳಿತಾಯದ ಅನುದಾನದಲ್ಲಿ ಸಭಾಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಡೇರಿ ಅಧ್ಯಕ್ಷ ಎಚ್.ಜಿ.ಶ್ರೀನಿವಾಸ್ ಮಾತನಾಡಿ, ಹಾಲು ಉತ್ಪಾದಕರ ಪರಿಶ್ರಮದಿಂದ ಉತ್ಪಾದನೆ ಮಾಡುವಂತಹ ಒಂದೊಂದು ಹನಿ ಹಾಲಿಗೂ ನ್ಯಾಯ ಕೊಡಬೇಕಾಗಿದೆ. ಡೇರಿಗಳು ಪರಸ್ಪರ ಸಹಕಾರಿ ತತ್ವದಡಿಯಲ್ಲಿ ಸಾಗಿದಾಗ ಮಾತ್ರ, ರೈತರಿಗೆ ನ್ಯಾಯಸಿಗುತ್ತದೆ. ಇತ್ತೀಚೆಗೆ ಹಸಿರು ಮೇವಿನ ಕೊರತೆಯಿಂದಾಗಿ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಮೊದಲು ದಿನವೊಂದಕ್ಕೆ ಸುಮಾರು 2,300 ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿತ್ತು. ಡೇರಿಯಲ್ಲಿ ಉಳಿತಾಯ ಮಾಡಿರುವ ಹಣದಲ್ಲಿ ಸಭಾಭವನ ನಿರ್ಮಾಣ ಮಾಡಲು ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಉತ್ಪಾದಕರಿಗೆ 15 ದಿನಗಳಿಗೊಮ್ಮೆ ಕೊಡಬೇಕಾಗಿರುವ ಹಾಲಿನ ಬಿಲ್ಲು ತಡವಾಗಬಾರದೆಂದು 15 ಲಕ್ಷ ರೂ.ಗಳ ಹಣವನ್ನು ನಮ್ಮ ಡೇರಿ ಉಳಿತಾಯ ಖಾತೆಯಲ್ಲಿ ಇಟ್ಟುಕೊಂಡಿರುತ್ತವೆ ಎಂದರು.
ಬಮುಲ್ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್ ಮಾತನಾಡಿ, ಹೈನುಗಾರಿಕೆಯಿಂದಲೇ ಜೀವನ ರೂಪಿಸಿಕೊಂಡಿರುವ ಕುಟುಂಬಗಳನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಹಾಲು ಒಕ್ಕೂಟದಿಂದಲೂ ಹಲವು ಸೌಲಭ್ಯಗಳನ್ನು ನಾವು ಕೊಡುತ್ತಿದ್ದೇವೆ. ಉತ್ಪಾದಕರಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಕೊಡಲು ಒಕ್ಕೂಟ ಸದಾ ಸಿದ್ಧವಾಗಿದೆ. ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು, ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ಡೇರಿಗಳನ್ನು ಮತ್ತಷ್ಟು ಸದೃಢವಾಗಿ ಮಾಡಬೇಕು ಎಂದರು.
ಬಮುಲ್ ಒಕ್ಕೂಟದ ವ್ಯವಸ್ಥಾಪಕ ಡಾ.ಗಂಗಯ್ಯ, ಉಪವ್ಯವಸ್ಥಾಪಕ ಡಾ.ರಾಜೇಶ್, ಮುಖಂಡರಾದ ಚಂದ್ರಪ್ಪ, ಸೊಣ್ಣೇಗೌಡ, ಮಾಜಿ ಡೇರಿ ಅಧ್ಯಕ್ಷ ವೆಂಕಟೇಶ್, ಗ್ರಾಪಂ ಸದಸ್ಯರಾದ ಆಂಜಿನಮ್ಮ, ಮಂಜುಳಾ, ಡೇರಿ ಕಾರ್ಯನಿರ್ವಾಹಕ ಮುನೇಗೌಡ ನಿರ್ದೇಶಕ ಸುಭ್ರಮಣ್ಯ, ಮುನಿಯಪ್ಪ, ರಾಮಣ್ಣ, ಭೈರೇಗೌಡ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net