ಮೈಷುಗರ್ ಶಾಲೆ ಗುತ್ತಿಗೆ ಹಗಲು ದರೋಡೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕೆ

Bhumi Puja for Auto Station construction work Mandya
Published on

ಮಂಡ್ಯ: ಮೈಶುಗರ್ ಪ್ರೌಢಶಾಲೆಯನ್ನು ಕಾಂಗ್ರೆಸ್ ಮುಖಂಡನ ವಿದ್ಯಾಸಂಸ್ಥೆಗೆ ಗುತ್ತಿಗೆಗೆ ನೀಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹಾಗೂ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಅನುದಾನದಿಂದ ನಿರ್ಮಾಣವಾಗುತ್ತಿರುವ ಸುಸಜ್ಜಿತ ಆಟೋ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮೈಶುಗರ್ ಪ್ರೌಢಶಾಲೆಯನ್ನು ಮಾದರಿ ಶಾಲೆ ಮಾಡಲು ನಾನು ತಯಾರಿದ್ದೇನೆ. ಈ ಬಗ್ಗೆ ಶಾಲೆಯ ಟ್ರಸ್ಟಿಗಳಿಗೆ ಹೇಳಿದ್ದೇನೆ. ಅದನ್ನು ಉಪಯೋಗಿಸಿಕೊಳ್ಳುವುದು ಬಿಡುವುದು ಅವರಿಗೆ ಸೇರಿದ್ದು. ಇಂತಹ ಆಸ್ತಿಯನ್ನು ಗುತ್ತಿಗೆ ಮೇಲೆ ಕೊಡುವುದು ಎಂದರೆ ಹೇಗೆ?. ಇದು ಹಗಲು ದರೋಡೆ ಆಗಿದೆ. ಮೈಶುಗರ್ ಶಾಲೆ ಅಭಿವೃದ್ಧಿಗೆ 25 ಕೋಟಿ ರೂ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ಕೊಡಲು ತಯಾರಿದ್ದೇನೆ. ಆದ್ದರಿಂದ ಗುತ್ತಿಗೆ ನೀಡುವ ಆಲೋಚನೆ ಸರಿ ಅಲ್ಲ ಎಂದು ಸಚಿವರು ಹೇಳಿದರು.

ಯುವಜನರಿಗೆ ಉದ್ಯೋಗ ಕೊಡಬೇಕೆಂಬ ನನ್ನ ಕನಸಿಗೆ ಈ ರಾಜ್ಯ ಸರ್ಕಾರದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಟೀಕೆಗಳಿಗಿಂತ ಹೆಚ್ಚಾಗಿ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಠಿ ಆಗಬೇಕು ಎಂಬುದು ನನ್ನ ಕನಸು. ಆದರೆ ರಾಜ್ಯ ಸರ್ಕಾರದಲ್ಲಿ ಸರಿಯಾದ ಸಹಕಾರ ಸಿಗುತ್ತಿಲ್ಲ. ಆದರೂ ನನ್ನ ಪ್ರಯತ್ನವನ್ನು ನಾನು ಮಾಡಿಯೇ ತೀರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಪ್ರಚಾರ ಬೇಡ, ಕೆಲಸ ಆಗಬೇಕು: ವಿ.ಸಿ ಾರ್ಮ್‌ನಲ್ಲಿ ಮಂಡ್ಯ ಕೃಷಿ ವಿಶ್ವವಿದ್ಯಾನಿಲಯ ಮಾಡುತ್ತಿದ್ದಾರೆ. ಅದನ್ನು ಎಷ್ಟು ದಿನ ನಡೆಸುತ್ತಾರೋ ಗೊತ್ತಿಲ್ಲ. ಬೀದರ್‌ನಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಮಾಡಿದ್ದರು. ಅದು ಮುಚ್ಚುವ ಸ್ಥಿತಿಯಲ್ಲಿದೆ. ಹಣ ಎಷ್ಟು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಎಚ್‌ಡಿಕೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಎಷ್ಟು ವಿವಿಗಳನ್ನು ಮುಚ್ಚಿದ್ದಾರೆ. ಆದ್ದರಿಂದ ಬರೀ ಪ್ರಚಾರಕ್ಕೆ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾನು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ದೊಡ್ಡ ದೊಡ್ಡ ಯೋಜನೆಗಳಿಗೆ ಚಾಲನೆ ಕೊಟ್ಟಾಗಲೂ ನಾನು ಪ್ರಚಾರಕ್ಕೆ ಹಾತೊರೆಯಲಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ, ಶಾಲೆ ಮಾಡಬೇಕು ಎಂಬ ಕನಸಿದೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ 8 ಕೋಟಿ ರೂ ವೆಚ್ಚದಲ್ಲಿ ಶಾಲೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ ಎಂದು ಹೇಳಿದರು.

ಅಂತೆಯೇ 100 ನಿಲ್ದಾಣಗಳಲ್ಲಿ ಬಸ್ ಶೆಲ್ಟರ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇವೆ. ಜಿಲ್ಲೆಯ ಅಂಗವಿಕಲರಿಗಾಗಿ ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸಿದ್ದೇನೆ. ಜಿಲ್ಲೆಗೆ ಪ್ರಮುಖ ಕಾರ್ಖಾನೆ ತರುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ. ಅದು ಜಿಲ್ಲೆಯ ಜನರ ದೊಡ್ಡ ನಿರೀಕ್ಷೆಯಾಗಿದೆ. ರಾಜ್ಯ ಸರ್ಕಾರ ಸಹಕಾರದ ಜತೆಗೆ ಜಾಗ ಕೊಟ್ಟರೆ ಈ ಯೋಜನೆ ಅನುಷ್ಠಾನಕ್ಕೆ ತಕ್ಷಣವೇ ಕ್ರಮ ವಹಿಸುತ್ತೇನೆ. ಇಲ್ಲಿ ಸುಸಜ್ಜಿತ ಆಟೋ ನಿಲ್ದಾಣ ಬೇಕು ಎನ್ನುವುದು ಬಹು ದಿನಗಳ ಬೇಡಿಕೆಯಾಗಿತ್ತು. ಆ ಬೇಡಿಕೆಯನ್ನು ಈಡೇರಿಸುವ ಕೆಲಸ ಆಗುತ್ತಿದೆ. ಶೀಘ್ರದಲ್ಲಿಯೇ ಈ ಜಾಗದಲ್ಲಿ ಅತ್ಯುತ್ತಮ ಆಟೋ ನಿಲ್ದಾಣ ತಲೆ ಎತ್ತಲಿದೆ ಎಂದು ತಿಳಿಸಿದರು.

ನಿಮ್ಮ ನಿಲ್ದಾಣಕ್ಕೆ ನೀವೇ ಭೂಮಿಪೂಜೆ ಮಾಡಿ ಎಂದು ಚಾಲಕರಿಗೆ ತಿಳಿಸಿದ್ದೆ. ನಾನು ಮತ್ತು ಚಾಲಕರು ಸೇರಿ ಪೂಜೆ ನೆರವೇರಿಸಿದ್ದೇವೆ. ಇದು ನನಗೆ ಬಹಳ ಖುಷಿ ತಂದಿದೆ. ನಗರದಲ್ಲಿ ಆಟೋ ವ್ಯವಸ್ಥೆ ಜನತೆಯ ಸಂಚಾರಕ್ಕೆ ಬಹಳ ಅನುಕೂಲವಾಗಿದೆ. ಆದರೆ, ಆಟೋ ಚಾಲಕರು ಮಳೆ, ಬಿಸಿಲಿನಲ್ಲಿ ಕಷ್ಟ ಅನುಭವಿಸುತ್ತಿದ್ದರು. ನಮಗೊಂದು ಸುಸಜ್ಜಿತ ನಿಲ್ದಾಣ ಮಾಡಿಕೊಡಿ ಎಂದು ಕೇಳಿದರು. ತಕ್ಷಣವೇ ಅದಕ್ಕೆ ಕ್ರಮ ವಹಿಸಿದ್ದೇವೆ. ದೇವೇಗೌಡರ ಸಂಸತ್ ನಿಧಿ ಹಾಗೂ ನನ್ನ ಪಾಲಿನ ಸಂಸತ್ ನಿಧಿಯ ಅನುದಾನದಿಂದ ಕಾಮಗಾರಿ ಕೈಗೆತ್ತಿಗೊಂಡಿದ್ದೇವೆ. ಈ ಸಂದರ್ಭದಲ್ಲಿ ಅನುದಾನ ನೀಡಿದ ದೇವೇಗೌಡರಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಮಾಜಿ ಶಾಸಕ ಸುರೇಶ್‌ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಪಿಇಟಿ ಅಧ್ಯಕ್ಷರೂ ಆದ ಜೆಡಿಎಸ್ ಯುವ ನಾಯಕ ಕೆ.ಎಸ್.ವಿಜಯಾನಂದ, ನಗರಸಭೆ ಅಧ್ಯಕ್ಷ ನಾಗೇಶ್, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್, ಆಟೋ ಚಾಲಕರ ಸಂಘದ ಕೊಮ್ಮೇರಹಳ್ಳಿ ಕೃಷ್ಣ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net