

ಮಂಡ್ಯ: ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಿದರೆ ಇಡೀ ದೇಶವೇ ಪ್ರಗತಿಯತ್ತ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ನನ್ನ ಅವಧಿಯಲ್ಲಿ ಯಾವುದೇ ಪಕ್ಷಭೇದ ಮಾಡದೆ ಕ್ಷೇತ್ರದ ಎಲ್ಲ ಗ್ರಾಮಗಳ ರಸ್ತೆಗಳು ಮತ್ತು ಚರಂಡಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದೇನೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿಯೇ ನನ್ನ ಮುಖ್ಯಗುರಿ. ಇದಕ್ಕಾಗಿ ಕೋಟ್ಯಂತರ ರೂ ಅನುದಾನವನ್ನು ಸರ್ಕಾರದ ಮಟ್ಟದಲ್ಲಿ ಮಂಜೂರು ಮಾಡಿಸಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಹೊಸಬೂದನೂರು ಗ್ರಾಮದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೊಸಬೂದನೂರು ಮತ್ತು ಹಳೇಬೂದನೂರು ಎರಡೂ ಗ್ರಾಮಗಳ ನಡುವೆ ಇರುವ ಕೆರೆಯನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರನ್ನು ಸೆಳೆಯಲು ದೋಣಿ ವಿಹಾರ ಮಾಡಲಾಗುವುದು. ಇದಕ್ಕೆ ಈಗಾಗಲೇ ನೀಲನಕ್ಷೆ ತಯಾರಾಗಿದೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಾಸಕರ ಅನುದಾನದಡಿ 3 ಲಕ್ಷ ರೂ.ಗಳನ್ನು ಶ್ರೀರಾಮ ಮಂದಿರ ಬಳಗದ ಪದಾಧಿಕಾರಿಗಳಿಗೆ ನೀಡಿ, ಮುಂದಿನ ದಿನಗಳಲ್ಲಿ 2 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಲಾಗುವುದು ಎಂದು ತಿಳಿಸಿದರು.
ಹೊಸಬೂದನೂರು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ರಘು, ಉಪಾಧ್ಯಕ್ಷ ಮಂಚದಾಸ್, ಸದಸ್ಯರಾದ ಬಿ.ಎಸ್.ಚೈತ್ರೇಶ್, ಬಿ.ಆರ್.ಮಂಜು, ರಾಜಶೇಖರ್, ಲಕ್ಷ್ಮಮ್ಮ, ರಾವಳ, ಗ್ರಾಪಂ ಸದಸ್ಯರಾದ ನಾಗೇಶ್, ಶಿಲ್ಪಾ, ಮಾಜಿ ಸದಸ್ಯರಾದ ರಾಮರಾಜ್, ಶಿವಲಿಂಗು, ಮುಖಂಡರಾದ ಚಂದ್ರಪ್ಪ, ಮರೀಗೌಡ, ಶಿವಕುಮಾರ್, ಶಂಕರ್, ರವಿ ಇತರರಿದ್ದರು.