

ಗೋಕರ್ಣ: ಇಲ್ಲಿನ ತದಡಿ ಬಂದರಿಗೆ ಮೀನುಗಾರಿಕೆ ಸಚಿವ ಮಂಕಾಳು ವೈದ್ಯ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಶುಕ್ರವಾರ ಬೋಟ್ ದುರಂತಕ್ಕೊಳಗಾದ ಅಳಿವೆ ಪ್ರದೇಶವನ್ನು ವೀಕ್ಷಿಸಿದರು.
ಬಳಿಕ ಮಾತನಾಡಿ, ತದಡಿ ಬಂದರಿನಲ್ಲಿ ಅಘನಾಶಿನಿ ನದಿ ಮತ್ತು ಸಮುದ್ರ ಸಂಧಿಸುವ ಸಂಗಮ ಪ್ರದೇಶದಲ್ಲಿನ ಹೂಳಿನಿಂದಾಗಿ ಮೀನುಗಾರಿಕೆ ಬೋಟ್‌ಗಳು ಸಂಚಾರ ವಿಪತ್ತಿಗೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ. ಅಳಿವೆ ಭಾಗದ ಹೂಳು ತೆಗೆದು ಸುರಕ್ಷಿತ ಸಂಚಾರಕ್ಕೆ ನೀಲಿನಕ್ಷೆ ಸಿದ್ಧಪಡಿಸಿ ಯೋಜನೆ ರೂಪಿಸುವ ಬಗ್ಗೆ ಇಲಾಖೆ ಕಾರ್ಯೋನ್ಮುಖವಾಗಲಿದೆ ಎಂದರು.
ಬೋಟ್‌ಗಳ ಸಂಖ್ಯೆ ಹೆಚ್ಚಾದ ಕಾರಣ ಈಗಿರುವ ಬಂದರು ಧಕ್ಕೆಯಲ್ಲಿ ಸ್ಥಳಾವಕಾಶ ಸಾಲದು. ಹೀಗಾಗಿ ಬಂದರಿನ ದಕ್ಷಿಣ ಭಾಗದ ತದಡಿ ಮತ್ತು ಬೇಲೇಕಾನ ಮಧ್ಯೆ ಹೊಸ ಬಂದರು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಅ.5ರಂದು ಭೂಮಿಪೂಜೆ ನಡೆಯುವ ಸಾಧ್ಯತೆಯಿದೆ. ನೂತನ ಬಂದರಿನಲ್ಲಿ ಬೋಟ್‌ಗಳ ಸರಾಗ ಸಂಚಾರಕ್ಕಾಗಿ ಬ್ರೇಕ್-ವಾಟರ್ ವ್ಯವಸ್ಥೆಯನ್ನು ಕೂಡ ಏರ್ಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ತಾಲೂಕು ಅಧ್ಯಕ್ಷ ಭುವನ ಭಾಗ್ವತ, ಮಹಾಬಲೇಶ್ವರ ಗೌಡ, ಹೊನ್ನಪ್ಪ ನಾಯಕ, ಪ್ರದೀಪ ನಾಯಕ, ನಾಗರಾಜ ಹಿತ್ತಲಮಕ್ಕಿ, ಬಾಬು ಕುಲಾಲ, ಜಗದೀಶ ಹರಿಕಂತ್ರ, ಪುಷ್ಪಾ ತಳೇಕರ, ರವಿ ಮೋಹನ ನಾಯ್ಕ, ನಾಗರಾಜ ನಾಯ್ಕ ಗಂಗಾವಳಿ,ಹನೀಫ್ ಸಾಬ್ ಇತರರಿದ್ದರು.