

ಬೆಂಗಳೂರು: ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ವಿಮಾನ ನಿಲ್ದಾಣ ಮೊದಲ ಹಂತದ ವಿಸ್ತರಣೆಗಾಗಿ ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮಧ್ಯ ಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಸಲ್ಲಿಸಿದರು.
ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸ ‘ಕಾವೇರಿ’ಯಲ್ಲಿ ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂಸದರು, ಮೈಸೂರು ಕ್ಷೇತ್ರದಲ್ಲಿ ಆಗಬೇಕಾಗಿರುವ ಅಭಿವೃವೃದ್ಧಿ ಯೋಜನೆಗಳು ಹಾಗೂ ಇತರ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿದ್ದು, ವಾಣಿಜ್ಯ ಚಟುವಟಿಕೆ ಹೆಚ್ಚಾಗಿ ನಡೆಯುತ್ತಿರುವುದರಿಂದ ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ, ಉದ್ಯಮಿಗಳಿಗೆ, ಅನುಕೂಲವಾಗಲು ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಮಾಡಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ 46 ಎಕರೆ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಮಧ್ಯಪ್ರವೇಶಿಸಬೇಕು ಎಂದು ಕೋರಿದರು.
ಈಗಾಗಲೇ ಭೂ ಸ್ವಾಧೀನಕ್ಕೆ ವಿಶೇಷ ಜಿಲ್ಲಾಧಿಕಾರಿಗಳ ಒಪ್ಪಿಗೆ ದೊರೆತಿದೆ. ಭೂ ಮಾಲೀಕರಿಗೆ ವೆಚ್ಚ ಪಾವತಿಸಿದ ನಂತರ ಹಸ್ತಾಂತರ ಪ್ರಕ್ರಿಯೆ ಸರಾಗವಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ನಂತರ ಭೂಮಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು.
ಭೂಮಿ ಹಸ್ತಾಂತರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗೆ ಅಡ್ಡಿಯಾಗಿದೆ. ಹಾಗಾಗಿ ಇತ್ತ ಗಮನಹರಿಸಬೇಕು. ಅಲ್ಲದೇ ಉದ್ದೇಶಿತ ವಿಮಾನ ನಿಲ್ದಾಣದಲ್ಲಿ, ನೀರಾವರಿ ಕಾಲುವೆ, ಓವರ್ ಹೆಡ್, ವಿದ್ಯುತ್ ತಂತಿಗಳಿವೆ. ಇವುಗಳನ್ನು ಕೂಡ ರಾಜ್ಯ ಸರ್ಕಾರ ತೆರವುಗೊಳಿಸಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರು.
ದೇವರಾಜ ಮಾರುಕಟ್ಟೆ ಸಂರಕ್ಷಿಸಲು ಮನವಿ
ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಪಾರಂಪರಿಕ ಕಟ್ಟಡಗಳಾಗಿದ್ದು, ಮೈಸೂರಿಗೆ ಕಲಶಪ್ರಾಯವಾಗಿವೆ. ಇವುಗಳನ್ನು ಕೆಡವದೇ ಉಳಿಸಿಕೊಂಡು ಸಂರಕ್ಷಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸಂಸದ ಯದುವೀರ ಮನವಿ ಮಾಡಿದರು.
ಮೈಸೂರಿನಲ್ಲಿ ಉದ್ದೇಶಿತ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ)ಗೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ಹಾಗಾಗಿ ತ್ವರಿತವಾಗಿ ಭೂ ಸ್ವಾಧೀನ ಮಾಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಕ್ರೀಡೆಗೆ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅನನ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಮೈಸೂರು ಖ್ಯಾತಿಯನ್ನು ಪಸರಿಸಲು ವಿಶ್ವದರ್ಜೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ಇದರಿಂದ ಮೈಸೂರಿನಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಲಿದೆ. ರಾಜ್ಯದ ಆರ್ಥಿಕತೆಗೂ ನೆರವಾಗಲಿದೆ ಎಂದು ವಿವರಿಸಿದರು.
ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಮೈಸೂರಿನಲ್ಲಿ ನಿರ್ಮಾಣವಾದರೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಹೀಗಾಗಿ ಕ್ಷಿಪ್ರಗತಿಯಲ್ಲಿ ಭೂ ಸ್ವಾಧೀನ, ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಕೋರಿದರು.
ಸಂಸದರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ವಿಮಾನ ನಿಲ್ದಾಣ ಹಾಗೂ ಕ್ರಿಕೆಟ್ ಮೈದಾನಕ್ಕೆ ಸಂಬಂಧಿಸಿದಂತೆ ಭೂಮಿ ಹಸ್ತಾಂತರ ವಿಷಯದಲ್ಲಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಇದ್ದರು.