

ಕಡೂರು: ಪಟ್ಟಣದ ಕೆಎಲ್‌ವಿ ವೃತ್ತದ ಸಮೀಪ ಕನ್ನಡ ತಾಯಿ ಭುವನೇಶ್ವರಿ
ಪುತ್ಥಳಿಯನ್ನು ಜ.5ರಂದು ಅನಾವರಣಗೊಳಿಸಲಾಗುವುದು ಎಂದು ಕನ್ನಡ ಸಾಹಿತ್ಯ
ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಪಟ್ಟಣದ ಪ್ರಮುಖ ಕೇಂದ್ರವಾಗಿರುವ ಕೆಎಲ್‌ವಿ ವೃತ್ತದ ಬಳಿ
ಮಹಿಳಾ ಘಟಕ ಮುತುವರ್ಜಿಯೊಂದಿಗೆ ಪ್ರತಿಷ್ಟಾಪನೆಗೆ ಮುಂದಾಗಿರುವುದು
ಹೆಮ್ಮೆಯ ಸಂಗತಿ. ಇದಕ್ಕೆ ಪುರಸಭೆ ಸಹಕಾರ ಹೆಚ್ಚಿನದ್ದಾಗಿದೆ ಎಂದರು.
ಕೃಷ್ಣಶಿಲೆಯಲ್ಲಿ 4.5 ಅಡಿ ಎತ್ತರದ ಭುವನೇಶ್ವರಿ ಪುತ್ಥಳಿ ನಿರ್ಮಿಸಲಾಗಿದೆ. ಪುತ್ಥಳಿ
ಹಿನ್ನೆಲೆಯಲ್ಲಿ ಕರ್ನಾಟಕದ ಭೂಪಟವಿರುವಂತೆ ವಿನ್ಯಾಸ ಮಾಡಲಾಗಿದೆ. ಶಿಲ್ಪಿ ತೀರ್ಥ
ರಾಜ ಗುಡಿಗಾರ 1.30 ಲಕ್ಷ ರೂ.ವೆಚ್ಚದಲ್ಲಿ ಪುತ್ಥಳಿ ನಿರ್ಮಿಸಲಾಗಿದೆ. ಅಂದು ಬೆಳಗ್ಗೆ
11ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ
ಹಾಗೂ ಶಾಸಕ ಕೆ.ಎಸ್.ಆನಂದ್ ಪುತ್ಥಳಿ ಅನಾವರಣಗೊಳಿಸಲಿದ್ದಾರೆ. ಪುರಸಭೆ
ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪಟ್ಟಣದ ಪ್ರಮುಖ ಸ್ಥಳದಲ್ಲಿ
ಭುವನೇಶ್ವರಿ ಪುತ್ಥಳಿ ಸ್ಥಾಪನೆಯಾಗುತ್ತಿರುವುದು ಸಂತಸದ ವಿಚಾರ. ಪುರಸಭೆಯಿಂದ
ಸೂಕ್ತ ಸ್ಥಳಾವಕಾಶ ನೀಡುವ ಜತೆಗೆ ಪುತ್ಥಳಿ ವೇದಿಕೆ ಅಭಿವೃದ್ದಿ ಕಾರ್ಯಗಳನ್ನು
ಕೈಗೊಳ್ಳಲಾಗಿದೆ. ಕನ್ನಡದ ಕಾರ್ಯಕ್ಕೆ ನಮ್ಮ ಬೆಂಬಲ ನಿರಂತರವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಸತ್ಯನಾರಾಯಣ್,
ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್, ನಗರ ಘಟಕದ ಅಧ್ಯಕ್ಷ
ಕೆ.ಪಿ.ರಾಘವೇಂದ್ರ, ಕುಪ್ಪಾಳು ಶಾಂತಮೂರ್ತಿ ಇದ್ದರು.