

ಉಳ್ಳಾಲ: ಮಕ್ಕಳಲ್ಲಿ ಸೃಜನಶೀಲತೆ, ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಬೆಳೆಸಲು ಹಾಗೂ ಭವಿಷ್ಯ ರೂಪಿಸುವಲ್ಲಿ ಬೇಸಿಗೆ ಶಿಬಿರ ಸಹಕಾರಿ ಎಂದು ನಿವೃತ್ತ ಪ್ರಾಧ್ಯಾಪಕಿ ಉಷಾ ಅಭಿಪ್ರಾಯಪಟ್ಟರು.
ಭ್ರಾಮರಿ ಮಹಿಳಾ ಮಂಡಲದ ಪ್ರಥಮ ವಾರ್ಷಿಕೋತ್ಸವ ಹಾಗೂ ಮೂರು ದಿನಗಳ ‘ಚಿಣ್ಣರ ಚಾವಡಿ’ ಬೇಸಿಗೆ ಶಿಬಿರಕ್ಕೆ ಮುನ್ನೂರು ಸುಭಾಷನಗರದ ಸಮುದಾಯ ಭವನದಲ್ಲಿ ಚಾಲನೆ ನೀಡಿ ಮಾತನಾಡಿದರು.
ತಾಂತ್ರಿಕ ಕೌಶಲ, ಕಲೆ, ಆಟೋಟಗಳ ಮೂಲಕ ಮಕ್ಕಳನ್ನು, ಸಮಗ್ರ ವ್ಯಕ್ತಿತ್ವ ವಿಕಸನದತ್ತ ಕೊಂಡೊಯ್ಯಲು ಶಿಬಿರಗಳು ದಾರಿ ತೋರಿಸುತ್ತವೆ. ಅಲ್ಲದೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಸಹಕಾರಿ. ಮಹಿಳಾ ಸಂಘ ಶಿಬಿರ ಅಯೋಜಿಸುವ ಮೂಲಕ ಮುಂದಿನ ಪೀಳಿಗೆಗೆ ನುರಿತ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತಿದೆ ಎಂದು ಶ್ಲಾಘಿಸಿದರು.
ವಕೀಲ ಮೊಹಮ್ಮದ್ ಅಸ್ಗರ್ ಸಾಂಬಾರತೋಟ ಅಧ್ಯಕ್ಷತೆ ವಹಿಸಿದ್ದರು. ಸಮಾಜಮುಖಿ ಸೇವೆಗಾಗಿ ಶಿಕ್ಷಕಿ ಗೀತಾ ಜುಡಿತ್ ಸಲ್ದಾನ್ಹ, ಕ್ರೀಡಾ ಸಾಧನೆಗಾಗಿ ಕಾವ್ಯಾ ಮತ್ತು ಮುನ್ನೂರು ಗ್ರಾ.ಪಂ. ನಿಕಟಪೂರ್ವ ಪಿಡಿಒ ರವೀಂದ್ರ ರಾಜೀವ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಮುನ್ನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಎಂ, ಅಯ್ಯಪ್ಪ ಭಜನಾ ಮಂದಿರದ ಟ್ರಸ್ಟಿ ಭಾಗ್ಯರಾಜ್, ದುರ್ಗಾವಾಹಿನಿ ಉಪಾಧ್ಯಕ್ಷೆ ಶಾರದಾ ನಾಯರ್, ಸುನೀತಾ ನಾಯಕ್, ಗೌರವಾಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಶ್ರುತಿ ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ವಂದಿಸಿದರು.