ಜು.18ರಂದು ಚಿತ್ರದುರ್ಗದಲ್ಲಿ ಭೋವಿ ಜನೋತ್ಸವ

s.ravikumar
ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಎಸ್.ರವಿಕುಮಾರ್
Published on

ಶಿವಮೊಗ್ಗ: ಚಿತ್ರದುರ್ಗ ಮತ್ತು ಬಾಗಲಕೋಟೆ ಭೋವಿ ಮಹಾಸಂಸ್ಥಾನದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ದೀಕ್ಷಾ ರಜತ ಮಹೋತ್ಸವ ಹಾಗೂ 14 ವರ್ಷದ ಪಟ್ಟಾಭಿಷೇಕದ ನಿಮಿತ್ತ ಭೋವಿ ಸಮಾಜದ ಬೃಹತ್ ಭೋವಿ ಜನೋತ್ಸವ ಕಾರ್ಯಕ್ರಮ ಜು.18ರಂದು ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಎಸ್.ರವಿಕುಮಾರ್ ತಿಳಿಸಿದರು.

ಭೋವಿ ಸಮಾಜ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸರಿದಾರಿಯಲ್ಲಿ ಸಾಗಲು ಶ್ರೀಗಳ ಪಾತ್ರ ದೊಡ್ಡದಿದೆ. ಅವರು ಬಂದ ನಂತರ ಸಮಾಜದಲ್ಲಿ ಜಾಗೃತಿ ಮೂಡಿದೆ. ಸಂಘಟನೆ ಬಲಿಷ್ಠವಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಗುರುಗಳ ಜನ್ಮದಿನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೀಕ್ಷಾ ರಜತಮಹೋತ್ಸವ, ಶ್ರೀಗಳ ಪಟ್ಟಾಭಿಷೇಕದ 14 ಮಹೋತ್ಸವದ ಜತೆಗೆ ರಾಜ್ಯಮಟ್ಟದ ಭೋವಿ-ವಡ್ಡರ ಪ್ರತಿಭಾ ಪುರಸ್ಕಾರ ಹಾಗೂ ವಧು-ವರರ ಮತ್ತು ಪಾಲಕರ ಸಮಾವೇಶವೂ ನಡೆಯಲಿದೆ. ಮುಂಬರುವ ದಿನಗಳಲ್ಲೂ ರಾಷ್ಟ್ರಮಟ್ಟದಲ್ಲಿ ಭೋವಿ ಸಮಾವೇಶ ನಡೆಸಲು ಉದ್ದೇಶಿಸಿದ್ದು, ಶೀಘ್ರವೇ ದಿನಾಂಕ ನಿಗದಿ ಮಾಡಲಾಗುವುದು ಎಂದರು.
ಭೋವಿ ಸಮಾಜದ ಶಿವಮೊಗ್ಗ ತಾಲೂಕು ಅಧ್ಯಕ್ಷ ಧೀರರಾಜ್ ಹೊನ್ನವಿಲೆ ಮಾತನಾಡಿ, ಈ ಸಮಾವೇಶದ ಮೂಲಕ ಹಲವು ಮಹತ್ವದ ನಿರ್ಧಾರಗಳು ಹೊರಬೀಳಲಿವೆ ಎಂದರು. ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರಿ, ಭೋವಿ ಸಮಾಜದ ಮುಖಂಡರಾದ ಜಗದೀಶ್, ತಿಮ್ಮರಾಜು, ಮಾರಪ್ಪ, ಹರ್ಷ ಭೋವಿ ಹಾಗೂ ವೀರೇಶ್ ಕ್ಯಾತಿನಕೊಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net