ಗಾಂಧಿ ಸ್ಮಾರಕ ಕಾಮಗಾರಿ ಪರಿಶೀಲಿಸಿದ ಭೋಸರಾಜು

gandhi smaraka
Published on

ಮಡಿಕೇರಿ: ನಗರದ ಗಾಂಧಿ ಮಂಟಪದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮಾರಕ ಉದ್ಯಾನವನ ಕಾಮಗಾರಿಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜುರವರು ವೀಕ್ಷಿಸಿದರು.


ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜತೆಗೆ ಆದಷ್ಟು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದ ಅವರು, ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೇ ೫೦ ಲಕ್ಷ ರೂ. ಬಿಡುಗಡೆಯಾಗಿದೆ. ವಿಧಾನ ಪರಿಷತ್ ಅನುದಾನದಿಂದಲೂ ಸಹ ೫ ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಹೇಳಿದರು.


ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ॥ ಮಂತರ್‌ಗೌಡ ಮಾತನಾಡಿ, ಕಾಮಗಾರಿ ತ್ವರಿತವಾಗಿ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಸೂಚಿಸಿದರು.


ಶಾಸಕರ ಅನುದಾನದಡಿ ಸಾಧ್ಯವಾದಷ್ಟು ೧೦ ಲಕ್ಷ ರೂ ವರೆಗೆ ಹಣ ಬಿಡುಗಡೆಗೆ ಕ್ರಮವಹಿಸಲಾಗುವುದು. ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಡಾ॥ ಮಂತರ್ ಗೌಡ ಹೇಳಿದರು.


ಸರ್ವೋದಯ ಸಮಿತಿ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಅನುದಾನ ಒದಗಿಸುವುದರ ಜತೆಗೆ ಮತ್ತಷ್ಟು ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಬೇಕೆಂದು ಕೋರಿದರು.


ಗಾಂಧಿ ಸ್ಮಾರಕ ಉದ್ಯಾನವನವನ್ನು ರಾಜ್‌ಘಾಟ್ ಮಾದರಿಯಲ್ಲಿ ನಿರ್ಮಿಸಬೇಕಿದೆ. ಆ ನಿಟ್ಟಿನಲ್ಲಿ ಆಕರ್ಷಣೀಯ ಕೇಂದ್ರವಾಗಿ ಗಾಂಧಿ ಸ್ಮಾರಕ ಉದ್ಯಾನವನ್ನು ಮಾದರಿಯಾಗಿ ನಿರ್ಮಿಸಬೇಕು ಎಂದು ಟಿ.ಪಿ.ರಮೇಶ್ ಕೋರಿದರು.


ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಸರ್ವೋದಯ ಸಮಿತಿ ಸದಸ್ಯರಾದ ಮುನೀರ್ ಅಹಮದ್, ನಿರ್ಮಿತಿ ಕೇಂದ್ರದ ಎಂಜಿನಿಯರ್ ರಾಘವೇಂದ್ರ, ಪ್ರಮುಖರಾದ ಕಾರ್ಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net