

ಮಂಡ್ಯ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಉಪಟಳ ಜಾಸ್ತಿಯಾಗಿದ್ದು, ಅವರಲ್ಲಿ ಯಾರೇ ಆಗಲಿ ನಿಮ್ಮ ಮನೆ ಬಳಿಗೆ ಬಂದು ಕಿರುಕುಳ ನೀಡಿದರೆ ತಕ್ಷಣವೇ ನನಗೆ ದೂರವಾಣಿ ಕರೆ ಮಾಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಧೈರ್ಯ ತುಂಬಿದರು.
ಮಂಡ್ಯ ತಾಲೂಕಿನ ಮತ್ತು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸಂತೆಕಸಲಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಭೂಮಿ ಸಿದ್ದೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಮಗೆ ಯಾರೇ ಮೈಕ್ರೋ ಫೈನಾನ್ಸ್‌ನವರು ಬಂದು ನಿನಗೆ ಕಿರುಕುಳ ನೀಡಿದರೆ ಹೆದರಬೇಡಿ. ರೌಡಿಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದರೆ ತಕ್ಷಣ ನನಗೆ ಕರೆ ಮಾಡಿ, ನಾನಿದ್ದೇನೆ. ನಿಮ್ಮ ಜೀವ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಜೀವ ಕಳೆದುಕೊಳ್ಳುವ ಕೆಲಸ ಮಾಡಬೇಡಿ ಎಂದು ಹೇಳಿದರು.
ಬಡ್ಡಿ, ಚಕ್ರಬಡ್ಡಿ ವಿಧಿಸಿ ಜನರಿಗೆ ಹಿಂಸೆ ಕೊಡುತ್ತಿದ್ದಾರೆ. ಇದು ಅಮಾನವೀಯ. ಅಸಲು ತೀರುವುದೇ ಇಲ್ಲ. ಹಳ್ಳಿಗಳಲ್ಲಿ ಯುವಕರು ಆನ್‌ಲೈನ್ ಆಟದ ಚಟಕ್ಕೆ ಸಿಕ್ಕಿಕೊಳ್ಳುತ್ತಿದ್ದಾರೆ. ಅಲ್ಲಿಯೂ ಸಾಲಕ್ಕೆ ಅವರು ಸಿಕ್ಕಿಕೊಂಡು ಕೊನೆಗೆ ಸಾವಿಗೆ ಶರಣಾಗುತ್ತಿದ್ದಾರೆ. ಇದು ಅತ್ಯಂತ ಧಾರುಣ. ನಾನು 2018ರಲ್ಲಿ ಸಿಎಂ ಆಗುವ ಮೊದಲು ಮಂಡ್ಯ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸರಣಿ ಸಾವುಗಳು ನನಗೆ ತೀವ್ರ ಆಘಾತ ಮಾಡುತ್ತಿದ್ದವು. ನಾನು ಮಂಡ್ಯಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ರೈತರಲ್ಲಿ ಮನವಿ ಮಾಡಿದೆ. ಆಮೇಲೆ ನಾನು 25 ಸಾವಿರ ಕೋಟಿ ರೂ ಸಾಲಮನ್ನಾ ಮಾಡಿದೆ. ಋಣಮುಕ್ತ ಕಾಯ್ದೆ ಜಾರಿಗೆ ತಂದೆ. ನಾನೇ ಸ್ವತಃ ರಾಷ್ಟ್ರಪತಿ ಬಳಿಗೆ ಹೋಗಿ ಕಾಯ್ದೆಗೆ ಅಂಕಿತ ಹಾಕಿಸಿಕೊಂಡು ಬಂದೆ ಎಂದು ವಿವರಿಸಿದರು.
ಮೈಕ್ರೋ ಫೈನಾನ್ಸ್ ಉಪಟಳ ಕೆಲ ತಿಂಗಳ ಹಿಂದೆ ಚಾಮರಾಜನಗರದಲ್ಲಿ ಆರಂಭವಾಯಿತು. ರಾಜ್ಯದ ಉದ್ದಗಲಕ್ಕೂ ಸರಣಿ ಸಾವುಗಳು ಸಂಭವಿಸುತ್ತಿವೆ. ಆದರೆ, ನಮ್ಮ ರಾಜ್ಯದ ಕಾನೂನು ಸಚಿವರು ಇನ್ನೂ ಸಮಗ್ರವಾಗಿ ಚಿಂತನೆ ಮಾಡುತ್ತಿದ್ದಾರೆ. ಬೇರೆ ಯಾವುದೇ ವಿಷಯಕ್ಕೆ ವಿದ್ಯುತ್ ವೇಗದಲ್ಲಿ ನಿರ್ಧಾರ ಕೈಗೊಳ್ಳುವ ಸರ್ಕಾರ, ಮೈಕ್ರೋ ಫೈನಾನ್ಸ್‌ಗಳಿಂದ ಜನರನ್ನು ರಕ್ಷಣೆ ಮಾಡಲು ಮೀನಮೇಷ ಎಣಿಸುತ್ತಿದೆ. ಇದು ಏಕೆ ಅನುಮಾನ ಕಾಡುತ್ತಿದೆ. ಹಳ್ಳಿಯ ಬದುಕು ಅಯೋಮಯವಾಗಿದೆ. ಹಳೆಯ ಕಾಲದ ಹಳ್ಳಿಗಳು ಮರೆಯಾಗುತ್ತಿವೆ. ಮಾನವೀಯ ಮೌಲ್ಯಗಳು ಅಳಿದು ಹೋಗುತ್ತಿವೆ. ಭಾರತ ಇಂದು ಜಗತ್ತಿನ ಮೂರನೇ ಅತಿದೊಡ್ಡ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಆದರೆ, ಸಮಾಜ ಕಲುಷಿತವಾಗುತ್ತಿದೆ. ಯುವ ಪೀಳಿಗೆ ದಾರಿ ತಪ್ಪುತ್ತಿದೆ. ನಾವು ಬೆಳೆಯಬೇಕು, ಅಭಿವೃದ್ಧಿ ಹೊಂದಬೇಕು ಹಾಗೂ ನಮ್ಮ ಸಮಾಜ ಸಂತೋಷವಾಗಿರಬೇಕು ಎಂದು ಆಶಿಸಿದರು.
ಹಿಂದೆ ಸಮಾಜದಲ್ಲಿ ಸೇವಾ ಮನೋಭಾವ, ನಿಸ್ವಾರ್ಥತೆ ಇತ್ತು. ಸಮಸ್ಯೆ ಬಂದರೆ ಗ್ರಾಮಸ್ಥರೇ ಕುಳಿತು ಬಗೆಹರಿಸಿಕೊಳ್ಳುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ಸಣ್ಣ ತುಂಡು ಭೂಮಿಗಾಗಿ ಅಣ್ಣತಮ್ಮಂದಿರು ಜಗಳ ಮಾಡಿಕೊಂಡು ಪೊಲೀಸ್ ಠಾಣೆ, ಕೋರ್ಟ್ ಎಂದು ಅಲೆಯುತ್ತಿದ್ದಾರೆ. ನೆಮ್ಮದಿಯ ಬದುಕು ದೂರವಾಗಿದೆ. ಹಳ್ಳಿ ಅಭಿವೃದ್ಧಿಯಾಗಬೇಕು. ಆದರೆ ನಮ್ಮ ಮೌಲ್ಯಗಳನ್ನು ಬಿಟ್ಟು ಕೊಡಬಾರದು. ರಾಜಕಾರಣಕ್ಕೆ ಪರಸ್ಪರ ಜಗಳ ಬೇಡ. ನಿಮ್ಮ ಮತ ನಿಮ್ಮ ಇಷ್ಟ. ರಾಜಕಾರಣ ನಿತ್ಯದ ಕೆಲಸವಾಗಬಾರದು ಎಂದು ಕಿವಿಮಾತು ಹೇಳಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ತಮ್ಮಣ್ಣ, ಉಪಾಧ್ಯಕ್ಷ ಶಿವಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇತರರಿದ್ದರು.