

ಮಂಡ್ಯ: ತಾಲೂಕಿನ ಸಂತೆಕಸಲಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಭೂಮಿ ಸಿದ್ದೇಶ್ವರಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವ ಜ.30ರಿಂದ ಫೆ.2ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್.ತಮ್ಮಣ್ಣ ತಿಳಿಸಿದರು.
ದೇವಾಲಯಕ್ಕೆ ಹಲವು ವರ್ಷದ ಇತಿಹಾಸವಿದೆ. 7 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸರ್ಕಾರದಿಂದ 35 ಲಕ್ಷ ರೂ.ಗಳ ಅನುದಾನ ದೊರೆತಿದೆ. 2ರಂದು ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಸಾನಿಧ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸುವರು. ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಕಳಸ ಸ್ಥಾಪನೆ ಮಾಡಲಿದ್ದು, ವಿಶ್ವಮಾನವ ಕ್ಷೇತ್ರ ಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಮೂಲ ದೇವರ ಪ್ರತಿಷ್ಠಾಪನೆ ನೆರವೇರಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇವಾಲಯದಲ್ಲಿ ಗಣಪತಿ ಮತ್ತು ಸುಬ್ರಹ್ಮಣ್ಯ ವಿಗ್ರಹಗಳನ್ನು ಭೂವರಾಹಸ್ವಾಮಿ ದೇವಾಲಯದ ಶ್ರೀನಿವಾಸ್ ರಾಘವನ್, ಸಿದ್ದಲಿಂಗದೇವರು ಪ್ರತಿಷ್ಠಾಪಿಸಲಿದ್ದು, ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟನೆ ಮಾಡಲಿದ್ದು, ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್.ತಮ್ಮಣ್ಣ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಸಮಿತಿಯ ಕಾರ್ಯದರ್ಶಿ ಬೋರೇಗೌಡ, ಖಜಾಂಚಿ ಚೇತನ್‌ಕುಮಾರ್, ಗವಿಗೌಡ, ಪ್ರಕಾಶ್, ಸಿದ್ದೇಗೌಡ ಇದ್ದರು.