

ಮಂಡ್ಯ: ಹುತಾತ್ಮ ವೀರ ಮಕ್ಕಳ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ತಾಲೂಕಿನ ಸಂತೆಕಸಲಗೆರೆ ಗ್ರಾಮದಲ್ಲಿ ನಡೆಯುವ ಶ್ರೀ ಭೂಮಿ ಸಿದ್ದೇಶ್ವರ ಸ್ವಾಮಿ ಅಟ್ಟುಣ್ಣುವ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಸಂತೆಕಸಲಗೆರೆ, ಹನಿಯಂಬಾಡಿ, ಕಾರಸವಾಡಿ, ಮಂಗಲ, ಕೊತ್ತತ್ತಿ, ಬೇವಿನಹಳ್ಳಿ, ಮೊತ್ತಹಳ್ಳಿ, ಹುಲ್ಕೆರೆ ಸೇರಿದಂತೆ ಸುತ್ತಮುತ್ತಲ 30 ಗ್ರಾಮದ ಜನರು ಈ ಜಾತ್ರೆಯಲ್ಲಿ ಭಾಗವಹಿಸಿದ್ದರು. ಯುಗಾದಿ ಹಬ್ಬದ ನಂತರ ನಡೆಯುವ ಈ ಜಾತ್ರೆ ವಿಶೇಷವಾಗಿರುತ್ತದೆ. ಸೋಮವಾರ ಸಂಜೆಯೇ ಬಾಯಿ ಬೀಗ ಆಚರಣೆ ನಡೆಯಿತು. ಮಂಗಳವಾರ ಬೆಳಗ್ಗೆಯಿಂದ ದೇವಾಲಯ ಆವರಣದಲ್ಲಿ ಸಾವಿರಾರು ಜನರು ದೇವರ ದರ್ಶನ ಪಡೆದರು. ಬಳಿಕ ಭಕ್ತರು ಪಾನಕ, ಮಜ್ಜಿಗೆ ಹಾಗೂ ರಸಾಯನ ವಿತರಣೆ ಮಾಡಿ ಸಂಭ್ರಮಿಸಿದರು.
ಜಾತ್ರೆಗೆ ಬಂದ ಮಹಿಳೆಯರು ಅಡುಗೆ ಸಾಮಗ್ರಿಗಳನ್ನು ಬುಟ್ಟಿಯಲ್ಲಿ ತಂದು ದೇವರ ಮುಂದಿಟ್ಟು ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಆವರಣಕ್ಕೆ ತೆರಳಿ ಅಡುಗೆ ಮಾಡಿದರು. ಸಸ್ಯಾಹಾರದ ಜತೆಗೆ ಮಾಂಸಾಹಾರವನ್ನೂ ಮಾಡಲಾಗಿತ್ತು, ಮಾಂಸಾಹಾರವನ್ನು ದೇವಾಲಯದ ಆವರಣದಲ್ಲಿಯೇ ಪೂಜೆ ಮಾಡಿ ಸಂಪ್ರದಾಯ ಆಚರಣೆ ಮಾಡಿದರು.
ಈ ಜಾತ್ರೆಯ ವಿಶೇಷವೆಂದರೆ ಜಾತ್ರೆ ಮುಗಿದ ಬಳಿಕ ರಾತ್ರಿ ವೇಳೆ ದೇವರ ಸನ್ನಿಧಿ ಅಂಗಳದಲ್ಲಿ ಯಾರೊಬ್ಬರೂ ಸುಳಿಯುವುದಿಲ್ಲ. ಬೆಳಗ್ಗೆ ವೇಳೆಗೆ ಜನರು ಉಂಡ ಎಲೆಗಳು ಒಂದೆಡೆ ಸೇರಿರುತ್ತವೆ ಎಂಬ ಪ್ರತೀತಿ ಇದೆ. ಪ್ರತಿ ಗುರುವಾರ ಮತ್ತು ಭಾನುವಾರ ದೇವರಿಗೆ ವಿಶೇಷ ಪೂಜೆ ಇರುತ್ತದೆ. ಮಕ್ಕಳಿಲ್ಲದವರು, ಮದುವೆಯಾಗದವರು ದೇವರಿಗೆ ರಜೆ ಹೊಡೆದು (ಸೇವೆ) ಮಾಡುವ ಮೂಲಕ ದೇವರಿಗೆ ಹರಕೆ ತೀರಿಸುವರು. ಜಾತ್ರೆ ಸಂದರ್ಭದಲ್ಲಿ ಬಾಯಿಬೀಗ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ.