

ಚಿತ್ರದುರ್ಗ: ಚಿತ್ರದುರ್ಗಸ ಶ್ರೀ ಸಾಯಿ ಸಂಕಲ್ಪ ಸೇವಾ ಸಮಿತಿಯಿಂದ ನಗರದ ಚಳ್ಳಕೆರೆ ರಸ್ತೆಯಲ್ಲಿ 10ರಿಂದ 15 ಕೋಟಿ ರೂ.ವೆಚ್ಚದಲ್ಲಿ ಶ್ರೀ ಶಿರಡಿ ಸಾಯಿಬಾಬಾ ದೇವಾಲಯ ನಿರ್ಮಾಣಕ್ಕೆ ಫೆ.12ರಂದು ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಮಿತಿ ಗೌರವಾಧ್ಯಕ್ಷ,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಪೂರ್ವಭಾವಿ ಸಭೆ ಹಾಗೂ ದೇವಾಲಯದ ನೀಲಿ ನಕ್ಷೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ,ಶ್ರೀ ಶನೈೀಶ್ಚರ ದೇವಾಲಯ ಒಂದು ಕಾಲು ಎಕರೆ ಜಮೀನಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತದೆ. ದೇವಾಲಯವನ್ನು 10 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರ ವೆಚ್ಚ 15 ಕೋಟಿ ರೂ.ಗಳಿಗೆ ಏರಬಹುದು ಎಂದರು.
ಪೂರ್ವಭಾವಿ ಸಭೆಯಲ್ಲಿ ಭಕ್ತರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ, ಈಗಾಗಲೇ ಒಂದು ಕೋಟಿ ರೂ.ದೇಣಿಗೆಯ ವಾ ಗ್ದಾನ ದೊರೆತಿದೆ. ದೇವಾಲಯ ನಿರ್ಮಾಣವಾದಂತೆ ಸಂಪನ್ಮೂಲ ಸಂಗ್ರಹವಾಗುತ್ತದೆ. ಮೂರು ಕೋಟಿ ರೂ.ವೆಚ್ಚದಲ್ಲಿ ದೇವಾಲಯಕ್ಕೆ ರಸ್ತೆ ನಿರ್ಮಿಸುವ ಅಗತ್ಯವಿದೆ ಂದು ತಿಳಿಸಿದರು.
ಪುಷ್ಕರಣಿಗಳು ಹಾಗೂ ಪಾರ್ಕ್ ಅಭಿವೃದ್ಧಿಗೆ ಕೇಂದ್ರದಿಂದ ನಾಲ್ಕು ಕೋಟಿ ರೂ.ಅನುದಾನ ಬಂದಿದೆ. ದೇವಾಲಯಕ್ಕೆ ಪೂರಕವಾಗಿ ಉದ್ಯಾನ ನಿರ್ಮಿಸುವ ಆಲೋಚನೆ ಇತ್ತು. ಆದರೆ ಅಲ್ಲಿ ಸ್ಥಳಾಭಾವವಿದೆ ಎಂದರು. ಇದೇ ವೇಳೆ ಶಾಸಕರು, ಸಮಿತಿಯ ಕ್ಯಾಲೆಂಡರ್ ಹಾಗೂ ವಿಜ್ಞಾಪನೆ ಪತ್ರ ಬಿಡುಗಡೆ ಮಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ ಪ್ರಾಸ್ತಾವಿಕವಾಗಿ ಮಾತನಾಡಿ,ಕಳೆದ 8 ವರ್ಷಗಳ ಹಿಂದೆ ಪೂರ್ವಭಾವಿ ಸಭೆ ನಡೆದಿತ್ತು. ಅಂದಾಜು 10 ಕೋಟಿ ರೂ.ವೆಚ್ಚದಲ್ಲಿ ದೇವಾಲಯವನ್ನು ನಿರ್ಮಿಸಲಾಗುವುದು. ಧ್ಯಾನಮಂದಿರ, ದರ್ಬಾರ್ ಹಾಲ್, ಚಾವಡಿ, ಗಣೇಶ, ಈಶ್ವರ, ದತ್ತಾತ್ರೇಯ, ಆಂಜನೇಯ ದೇವಾಲಯಗಳೊಂದಿಗೆ ಶಿರಡಿ ಮಾದರಿಯ ದೇವಾಲಯ ನಿರ್ಮಾಣ ವಾಗಲಿದೆ. ಭಕ್ತರು ತನು,ಮನ ಹಾಗೂ ಧನದೊಂದಿಗೆ ಸಹಕರಿಸಲು ಮನವಿ ಮಾಡಿದರು.
ಸಮಿತಿ ಅಧ್ಯಕ್ಷ ತೇಜಸ್ವಿ ಅಧ್ಯಕ್ಷತೆ ವಹಿಸಿದ್ದರು. ಕಾರ‌್ಯದರ್ಶಿ ನಯನ್‌ಕುಮಾರ್, ಆರ್ಯವೈಶ್ಯ ಸಂಘದ ಮಾಜಿ ಅಧ್ಯಕ್ಷ ಕಾಶಿವಿಶ್ವನಾಥ ಶೆಟ್ಟಿ, ತುಮಕೂರು ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಅಧ್ಯಕ್ಷ ಬಿ.ಆರ್.ನಟರಾಜಶೆಟ್ಟಿ, ಚಳ್ಳಕೆರೆ ಶ್ರೀ ವೆಂಕಟಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಸಂಜೀವಮೂರ್ತಿ, ಹೊಸದುರ್ಗದ ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ ಅಧ್ಯಕ್ಷ ಹಂಜಿ ಶಿವಸ್ವಾಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಹರೀಶ್, ಜಯಣ್ಣ, ಪರಮೇಶ್, ತಾಪಂ ಮಾಜಿ ಸದಸ್ಯ ವೀರೇಶ್, ಕೃಷ್ಣ, ರವಿಕುಮಾರ್ ಇತರರು ಇದ್ದರು.