

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ 20 ಲಕ್ಷ ರೂ.ವೆಚ್ಚದಡಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಜಿ.ಡಿ.ಹರೀಶ್‌ಗೌಡ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ, ಅಂಬೇಡ್ಕರ್ ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿ ಎಲ್ಲ ಜಾತಿ, ಧರ್ಮ, ಭಾಷೆಯ ಜನರು ಸಮಾನತೆಯಿಂದ ಬಾಳುವ ಅವಕಾಶ ಮಾಡಿಕೊಟ್ಟಿದ್ದಾರೆ. ಕಟ್ಟೆಮಳಲವಾಡಿ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗ್ರಂಥಾಲಯ, ಜಾಗೃತಿ ಕಾರ್ಯಕ್ರಮಗಳು ಮುಂತಾದ ಕಾರ್ಯಗಳನ್ನು ನಡೆಸಲು ತಾವೆಲ್ಲರೂ ಸಹಕರಿಸಬೇಕು. ಇದು ಜ್ಞಾನದ ಕೇಂದ್ರವಾಗಬೇಕು ಎಂದು ಸಲಹೆ ನೀಡಿದರು. ಗ್ರಾಮದ ಜನರ ಒತ್ತಾಸೆಯಂತೆ ಹೆಚ್ಚುವರಿಯಾಗಿ ಭವನದ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಅಂಬೇಡ್ಕರ್ ಪುತ್ಥಳಿ ನಿರ್ಮಾಣ:
ಕಟ್ಟೆಮಳಲವಾಡಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ. ಅಂಬೇಡ್ಕರ್ ಪುತ್ಥಳಿ ಕಾಮಗಾರಿಯು ಇಡೀ ಜಿಲ್ಲೆಯಲ್ಲಿ ಎಲ್ಲಿಯೂ ಆಗಿರುವುದಿಲ್ಲ. ಇದು ಮಹತ್ವದ ಕಾರ್ಯವಾಗಿದ್ದು, ಈ ಕಾಮಗಾರಿಗೆ ನನ್ನ ಸ್ವಂತ ಹಣ 24 ಲಕ್ಷ ರೂ.ಕೊಟ್ಟಿರುವೆ. ಇನ್ನು ಮುಂದೆ ಅಂಬೇಡ್ಕರ್ ಅವರ ಪುತ್ಥಳಿ ಪ್ರದೇಶಕ್ಕೆ ಪಾರ್ಕ್, ಸುತ್ತಲೂ ಕಾಂಪೌಂಡ್, ಗೇಟ್, ಕುಡಿಯುವ ನೀರು, ಶೌಚಗೃಹ, ಲೈಟಿಂಗ್ ವ್ಯವಸ್ಥೆ, ಕುಳಿತುಕೊಳ್ಳಲು ಕಲ್ಲಿನ ಆಸನಗಳು ಸೇರಿದಂತೆ ಮುಂತಾದ ಮೂಲಸೌಕರ್ಯ ಕಲ್ಪಿಸಲು ಶಾಸಕರ ನಿಧಿ ಮತ್ತು ಇತರ ಜನಪ್ರತಿನಿಧಿಗಳ ಸಹಕಾರದಿಂದ ಕ್ರಮ ವಹಿಸಲಾಗುವುದು ಎಂದರು.
ಅಂಬೇಡ್ಕರ್ ಪುತ್ಥಳಿ ಅಧಕ್ಷ ನಾಗರಾಜ್ ಮಲ್ಲಾಡಿ ಮಾತನಾಡಿ ಅಂಬೇಡ್ಕರ್ ಅವರ ಪುತ್ಥಳಿ ಕಾರ್ಯ ಹಣಕಾಸಿನ ತೊಂದರೆಯಿಂದ ಕುಂಠಿತವಾಗಿದ್ದು, ಈ ಕಾರ್ಯಕ್ಕೆ ಹಲವಾರು ಜನಪ್ರತಿನಿಧಿಗಳು ಸಹಕಾರ ನೀಡುತ್ತೇವೆ ಎಂದವರೇ ಸಹಕಾರ ನೀಡದೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವರು ಈ ಪುತ್ಥಳಿ ಕಾಮಗಾರಿಗೆ 50 ಲಕ್ಷ ರೂ. ಅನುದಾನ ಕೊಡುತ್ತೇವೆ ಎಂದು ಹೇಳಿ ವಿಳಂಬ ಮಾಡುತ್ತಿರುವುದು ನಮಗೆ ನೋವು ತಂದಿದೆ. ಸಚಿವರು ಹೇಳಿದಂತೆ 50 ಲಕ್ಷ ರೂ.ಹಣವನ್ನು ಬಿಡುಗಡೆಗೊಳಿಸಬೇಕು. ತಪ್ಪಿದರೆ ನಾವು ಈ ಪುತ್ಥಳಿ ಕಾಮಗಾರಿಗೆ ಅನುದಾನ ಕೊಡುವುದಿಲ್ಲ ಎಂದು ಹೇಳಬೇಕು. ವಿಳಂಬ ಮಾಡುತ್ತಿರುವುದು ಅವರಿಗೆ ಶೋಭೆ ತರುದಿಲ್ಲ ಎಂದರು.
ಸಮಿತಿಯ ಉಪಾಧ್ಯಕ್ಷ ನಿಂಗರಾಜ್ ಮಲ್ಲಾಡಿ ಮಾತನಾಡಿ, ಅಂಬೇಡ್ಕರ್ ರವರ ಪುತ್ಥಳಿ ಕಾರ್ಯವು ಬಹಳ ಮಹತ್ವವಾಗಿದ್ದು, ಯಾರೂ ರಾಜಕೀಯ ಮಾಡದೆ ಎಲ್ಲರೂ ಕೈ ಜೋಡಿಸಿ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಟ್ಟೆಮಳಲವಾಡಿ ಗ್ರಾಮದಲ್ಲಿ 8 ಎಕರೆ ಗ್ರಾಮ ಠಾಣಾವಿದ್ದು, ಅಳತೆ ಮಾಡಿಸಿ ಎಲ್ಲ ಜಾತಿಯ ಬಡ ಕುಟುಂಬಗಳ ನಿವೇಶನರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಮನೆಗಳನ್ನು ಕಟ್ಟಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ, ಭೂ ಸೇನಾ ನಿಗಮದ ಎಇಇ ಕೀರ್ತನ್, ಗ್ರಾಮ ಆಡಳಿತಾಧಿಕಾರಿ ಶ್ರೀವತ್ಸ, ಗ್ರಾಪಂ ಅಧ್ಯಕ್ಷ ಚಿನ್ನಮುತ್ತು, ಪುಟ್ಟರಾಜು, ಉಪಾಧ್ಯಕ್ಷ ದಿಲೀಪ್, ಪಿಡಿಒ ವಿಜಯಕುಮಾರಿ, ಗ್ರಾಪಂ ಸದಸ್ಯರಾದ ನಟರಾಜು, ಎಸ್.ಗಣೇಶ, ನಾಗೇಂದ್ರಶೆಟ್ಟಿ, ಪುತ್ಥಳಿ ಸಮಿತಿಯ ಸದಸ್ಯರುಗಳಾದ ಪಿ.ಪುಟ್ಟರಾಜು, ರಾಜು, ಶ್ರೀಧರ, ಸಂತೋಷ, ಮಧು, ಕುಮಾರ, ಪುಟ್ಟರಾಜ ಇತರರು ಇದ್ದರು.