

ವಿಜಯಪುರ: ನಗರ ಮತೇತ್ರದ ವ್ಯಾಪ್ತಿಯ ವಿವಿಧೆಡೆ ಸಮುದಾಯ ಭವನ, ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ವಿಜಯಪುರ ತೊರವಿ ಗ್ರಾಪಂ ವ್ಯಾಪ್ತಿಯ ನವರಸಪುರದ ವಿಜಯ ಕಾಲನಿಯ ಹನುಮಾನ ದೇವಸ್ಥಾನ ಬಳಿ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರಿಸಿದ 5 ಲ ರೂಗಳ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ, ಅಟಲ್ ಬಿಹಾರಿ ವಾಜಪೇಯಿ ರಸ್ತೆಯಲ್ಲಿ ನಿರ್ಮಿಸಿದ ಕೊಳಗೇರಿ ಮನೆಗಳ ಹತ್ತಿರ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಜೂರಾದ 56.35 ಲ ರೂಗಳ ಅನುದಾನದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿದ ಜಿ+1 ಮಾದರಿ ಮನೆಗಳಿಗೆ ಕಿರು ನೀರು ಸರಬರಾಜು, ಸಿಸಿ ರಸ್ತೆ ಹಾಗೂ ಆರ್ಸಿಸಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮಾಡಿದರು.
ನಗರದ ವಾರ್ಡ್ ನಂ. 24ರ ಕಮಾನಖಾನ್ ಬಜಾರ್(ಗೌಡರ ಓಣಿ)ದಲ್ಲಿನ ಬಸವಣ್ಣ ದೇವರ ಪುರಾತನ ದೇವಸ್ಥಾನದ ಬಳಿ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ನಿಧಿ ಮತ್ತು ಮುಜರಾಯಿ ಇಲಾಖೆಯಿಂದ ಮಂಜೂರಾದ 14 ಲ ರೂಗಳ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ ನಮ್ಮ ಗಂಡು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 18 ರಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಬಯಲು ಸೀಮೆ ಅಭಿವೃದ್ಧಿ ಮಂಡಳಿಯಿಂದ 45 ಲ ರೂಗಳ ಅನುದಾನದಲ್ಲಿ 3 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಸಾರ್ವಜನಿಕರಿಂದ ಅಹವಾಲು ಆಲಿಸಿದರು.
ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ವಿಠ್ಠಲ ಹೊಸಪೇಟ, ಮಲ್ಲಿಕಾರ್ಜುನ ಗಡಗಿ, ಮುಖಂಡರಾದ ಅಶೋಕ ಬೆಲ್ಲದ, ಸಂತೋಷ ಪಾಟೀಲ, ದಾದಾಸಾಹೇಬ ಬಾಗಾಯತ, ಚಂದ್ರು ಚೌದರಿ ಮತ್ತಿತರರಿದ್ದರು.