

ದೊಡ್ಡಬಳ್ಳಾಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭವನವನ್ನು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ಈ ಭವನಗಳು ಸಮುದಾಯದ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಚಿಕ್ಕತುಮಕೂರು ಗ್ರಾಮದಲ್ಲಿ ಶುಕ್ರವಾರ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸುಮಾರು 2.5 ಕೋಟಿ ರೂಪಾಯಿಗಳಲ್ಲಿ ತಾಲೂಕಿನ 10 ಗ್ರಾಮಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮಮಟ್ಟದ ಭವನಗಳನ್ನು ಸ್ವಂತ ಮನೆಗಳಂತೆ ಸಮುದಾಯದವರು ನೋಡಿಕೊಳ್ಳಬೇಕು. ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಮೇಲ್ವಿಚಾರಣೆ ಮಾಡಬೇಕು ಎಂದರು. ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದಾಗಿ ನಾವೆಲ್ಲರೂ ಇಂದು ಈ ಸ್ಥಿತಿಯಲ್ಲಿದ್ದೇವೆ. ಇಲ್ಲದಿದ್ದರೆ, ನಮ್ಮ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ನೂರಾರು ವರ್ಷಗಳಿಂದ ಅವಕಾಶ ವಂಚಿತರಾದವರಿಗೆ ಸಂವಿಧಾನದತ್ತವಾಗಿ ಹಲವು ಸೌಲಭ್ಯಗಳನ್ನು ಕೊಟ್ಟರು. ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಾವು ಸ್ವಾವಲಂಬಿಗಳಾಗಿ ಬದುಕಲು ಬುನಾದಿ ಹಾಕಿದರು ಎಂದು ತಿಳಿಸಿದರು. ಬಮುಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಮಾತನಾಡಿ, ಸಮಬಾಳು ಮತ್ತು ಸಮಪಾಲು ಅಂಬೇಡ್ಕರ್ ಅವರ ಆಶಯವಾಗಿತ್ತು. ಅದು ಈಡೇರಬೇಕಾದರೆ, ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು. ಈ ನಿಟ್ಟಿನಲ್ಲಿ ನಮ್ಮೆಲ್ಲರ ಮೇಲೆ ಮಹತ್ತರ ಜವಾಬ್ದಾರಿಗಳಿವೆ. ಅವುಗಳನ್ನು ನಿರ್ವಹಿಸುವ ಮೂಲಕ ಶೋಷಿತ ಹಾಗೂ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಬೇಕು. ಆ ಮೂಲಕ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.