ಅನುಮೋದನೆ ದೊರೆತ ಕಾಮಗಾರಿಗೆ ಭೂಮಿಪೂಜೆ

ಕೆಂಚನಹಳ್ಳಿಯಲ್ಲಿ 2 ಕೋಟಿಯಲ್ಲಿ ರಸ್ತೆ ಕಾಮಗಾರಿ
ಕೆಂಚನಹಳ್ಳಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಆರಂಭವಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ರವಿಶಂಕರ್ ವೀಕ್ಷಿಸಿ ಪರಿಶೀಲನೆ ನಡೆಸಿದರು. ಉದಯಶಂಕರ್, ಸುಮಿತಾ, ಮೋಹನ್, ಪ್ರತಾಪ್ ಇತರರು ಇದ್ದರು.
Published on

ಸಾಲಿಗ್ರಾಮ: ಸರ್ಕಾರದಿಂದ ಅನುಮೋದನೆ ದೊರಕಿದ ಮೇಲೆ ಕಾಮಗಾರಿಗೆ ಭೂಮಿ ಪೂಜೆ ಮಾಡಬಹುದು ಎಂದು ತಾವುಗಳೇ ಈ ಹಿಂದೆ ಹೇಳಿದ್ದೀರಿ? ಆದರೆ ಈಗ ಮತ್ತೆ ನೀವೇ ಪ್ರಶ್ನೆ ಮಾಡುತ್ತಿದ್ದೀರಿ. ಇದನ್ನು ನೀವು ಮರೆತಿರಬಹುದು ಆದರೆ ಜನರು ಮರೆತಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಶಾಸಕ ಡಿ.ರವಿಶಂಕರ್ ತಿರುಗೇಟು ನೀಡಿದರು.

ಕೆಂಚನಹಳ್ಳಿ ಗ್ರಾಮದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭವಾಗುತ್ತಿರುವ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿವಿಧ ಖಾತೆಯ ಸಚಿವರು ನಮ್ಮ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವ ಮೂಲಕ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಎರಡು ತಾಲೂಕುಗಳ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದರು.

ವಿಪಕ್ಷಗಳು ಟೀಕೆ ಮಾಡುವುದು ಸಹಜ. ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದರೆ ಆ ಟೀಕೆಗಳು ನಮಗೆ ಅನ್ವಯವಾಗುತ್ತವೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ ಎಂದರೆ ಟೀಕೆಗಳು ಪ್ರಯೋಜನವಾಗುವುದಿಲ್ಲ. ಕ್ಷೇತ್ರದಲ್ಲಿ ಬಹುಮುಖ್ಯವಾಗಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರೆ ಅವುಗಳನ್ನು ಸರ್ಕಾರದ ವತಿಯಿಂದ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈಗಾಗಲೇ ಸರ್ಕಾರದಿಂದ ಮಂಜೂರಾಗಿರುವ ಅನುದಾನಗಳು ಟೆಂಡರ್ ಆಗಿ ಗುತ್ತಿಗೆದಾರರಿಗೆ ಸಿಕ್ಕಿವೆ. ಅನುಮೋದನೆ ಆಗದಿರುವ ಕೆಲಸಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿರುವುದು. ಅನುದಾನ ಇಲ್ಲದೆ ಪೂಜೆ ಮಾಡಿಲ್ಲ. ಹಾಗಂತ ಪರಾಜಿತ ಅಭ್ಯರ್ಥಿಯಾಗಿದ್ದವರು ಅವಧಿಯಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ ಎಂದು ನಾವು ಹೇಳುತ್ತಿಲ್ಲ. ಅವರ ಅಭಿವೃದ್ಧಿಗೆ ಆಗ ನಾವು ಹೇಗೆ ಸಹಕಾರ ನೀಡಿದ್ದೇವೋ ಅದೇ ರೀತಿ ಈಗ ತಾಲೂಕಿನಲ್ಲಿ ಆಗುತ್ತಿರುವ ಅಭಿವೃದ್ಧಿಗೆ ಸಹಕಾರ ನೀಡುವುದು ಅವರ ಕರ್ತವ್ಯ. ನೀವೇ ತರಲಿ ಅಥವಾ ನಾವೇ ತಂದಿರಲಿ ಯಾರು ತಂದರು ಅದು ಸರ್ಕಾರದ ಹಣ ಅಲ್ಲವೆ? ಅದು ಕೆ.ಆರ್.ನಗರ ಮತ್ತು ತಾಲೂಕಿನ ಸಮಗ್ರ ಅಭಿವೃದ್ಧಿಗಲ್ಲವೇ ಎಂದು ಟಾಂಗ್ ನೀಡಿದರು.

ಹಿಂದೆ ಇದ್ದ ಶಾಸಕರು ಅವರ ಅವಧಿಯಲ್ಲಿ ಅಭಿವೃದ್ಧಿ ಮಾಡಿರುತ್ತಾರೆ. ಉಳಿದ ಅಭಿವೃದ್ಧಿಗಳನ್ನು ಮುಂದೆ ಬಂದಂತಹ ಶಾಸಕರು ಮಾಡುತ್ತಾರೆ. ನೀವು ಬರುವುದಕ್ಕಿಂತ ಮುಂಚೆ ಶಾಸಕರು ತಂದಂತಹ ಅಭಿವೃದ್ಧಿ ಕಾರ್ಯಗಳನ್ನು ನೀವು ಮಾಡಿಲ್ಲವೇ? ನಿಮ್ಮ ಅವಧಿಯಲ್ಲಿ ನಿಂತ ಕಾರ್ಯಗಳು ಈಗ ಪೂರ್ಣವಾಗುತ್ತಿಲ್ಲವೇ? ನಾವು ತಂದ ಅನುದಾನಗಳು ಮುಂದೆ ಆಗಬೇಕಾದ ಕೆಲಸಗಳನ್ನು ಪೂರ್ಣ ಮಾಡುತ್ತದೆ ಅಷ್ಟೆ ಎಂದರು.

ಬಾಚಳ್ಳಿ ಸಂಕನಹಳ್ಳಿ ಮಾರ್ಗ ಕೆಂಚನಹಳ್ಳಿ ಗೇರದಡ ಸೇರಿದಂತೆ ಈ ಭಾಗದ ರಸ್ತೆಗಳು ಸುಮಾರು 25 ವರ್ಷಗಳಿಂದ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿತು. ಇಲ್ಲಿ ಜನರು ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಈ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಎರಡು ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ. ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿವಿಧ ಖಾತೆಯ ಸಚಿವರು ಕೆ.ಆರ್.ನಗರಕ್ಕೆ ಆಗಮಿಸಿ ಚಾಲನೆ ನೀಡಿದ್ದರು. ಅದರ ಅಂಗವಾಗಿ ಕಾಮಗಾರಿ ಪ್ರಾರಂಭವಾಗುತ್ತಿದೆ. ಸುತ್ತಮುತ್ತ ಗ್ರಾಮಗಳಲ್ಲಿ ತುರ್ತಾಗಿ ಆಗಬೇಕಾದ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಡಿ.ರವಿಶಂಕರ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದ ಮುಖಂಡರು ಮತ್ತು ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು. ಪ್ರತಿ ಮಂಗಳವಾರ ಜನರ ಕುಂದು ೊರತೆ ಆಲಿಸಲು ‘ಬಾಗಿಲಿಗೆ ಬಂತು ಸರ್ಕಾರ, ಅಭಿವೃದ್ಧಿಗೆ ಇರಲಿ ನಿಮ್ಮ ಸಹಕಾರ ’ ಎಂಬ ಕಾರ್ಯಕ್ರಮವನ್ನು ಮುಂದುವರಿಸಿದರೆ ಗ್ರಾಮಗಳಲ್ಲಿ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯುತ್ತವೆ ಎಂದು ಶಾಸಕರಿಗೆ ಜನರು ಮನವಿ ಮಾಡಿದರು.

ಸದ್ಯದಲ್ಲೇ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಗ್ರಾಮಗಳಿಗೆ ತಾಲೂಕು ಆಡಳಿತದ ಎಲ್ಲ ಅಧಿಕಾರಿಗಳನ್ನು ಕರೆತಂದು ಕುಂದುಕೊರತೆ ಸಭೆ ಮುಂದುವರಿಸಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿ ತಾಲೂಕು ಅಧ್ಯಕ್ಷ ಉದಯಶಂಕರ್, ಲೋಕಪಯೋಗಿ ಇಲಾಖೆ ಎಇಇ ಸುಮಿತಾ, ಜೆಇ ಮೋಹನ್, ಪಿಡಿಒ ಪ್ರತಾಪ್, ಸಿಆರ್‌ಪಿ ರಮೇಶ್, ಗುತ್ತಿಗೆದಾರ ಗಳಿಗೆಕೆರೆ ತೋಟಪ್ಪನಾಯಕ, ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷ ನರಸಿಂಹನಾಯಕ, ಗ್ರಾಮ ಪಂಚಾಯಿತಿ ಸದಸ್ಯ ಸಣ್ಣನಿಂಗೇಗೌಡ, ಯತಿರಾಜ್, ಮಾಜಿ ಗ್ರಾಪಂ ಅಧ್ಯಕ್ಷೆ ಉಮಾ ಮಾದೇವ್, ಮಾಜಿ ಸದಸ್ಯ ಜಯಪ್ಪ, ಕೃಷ್ಣೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಕೆ.ಆರ್.ರವಿ, ಚಿಕ್ಕಲಿಂಗೇಗೌಡ, ಹರೀಶ್, ಪುಟ್ಟಸ್ವಾಮಿಗೌಡ, ಪ್ರಸನ್ನ, ಜಯರಾಮೇಗೌಡ, ಬಾಚಳ್ಳಿ ಹರೀಶ್, ಚಂದ್ರಹಾಸ, ಪುಟ್ಟಸ್ವಾಮಿಗೌಡ, ಸ್ವರೂಪ, ಮುದುಗುಪ್ಪೆ ಮಹದೇವ್, ಚಿಕ್ಕಭೇರ್ಯ ವೆಂಕಟೇಶ್ ಶ್ರೀನಿವಾಸ್, ಸುಧಾಕರ್, ಟಿ.ಸಿ.ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net