ಪ್ರತಿ ಶನಿವಾರ ಬಸರಾಳಿನಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

Bhoomi Puja for Agriculture Department building in Basaralu village
Published on

ಮಂಡ್ಯ: ಬಸರಾಳು ಭಾಗದ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲು ಪ್ರತಿ ಶನಿವಾರ ಗ್ರಾಮದಲ್ಲಿನ ಕಚೇರಿಯಲ್ಲಿ ಲಭ್ಯವಿರುವುದಾಗಿ ಶಾಸಕ ರವಿಕುಮಾರ್ ಗಣಿಗ ಹೇಳಿದರು.

ತಾಲೂಕಿನ ಬಸರಾಳು ಗ್ರಾಮದಲ್ಲಿ ಕೃಷಿ ಇಲಾಖೆ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರು ತಮ್ಮ ಮನವಿ ಸಲ್ಲಿಸಲು ಮಂಡ್ಯಕ್ಕೆ ಆಗಮಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಬಸರಾಳಿನಲ್ಲಿಯೇ ಪ್ರತಿ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೆ ಲಭ್ಯವಿರುತ್ತೇನೆ. ಜತೆಗೆ ಆಪ್ತಸಹಾಯಕರು ಇರುತ್ತಾರೆ ಎಂದರು.

ಗ್ರಾಮಕ್ಕೆ ಕೃಷಿ ಇಲಾಖೆಯಿಂದ ಕಟ್ಟಡಬೇಕೆಂದು ಮನವಿ ಮಾಡಲಾಗಿತ್ತು. ಸಚಿವ ಎನ್.ಚಲುವರಾಯಸ್ವಾಮಿ ಅವರು 2 ಕೋಟಿ ರೂ ಅನುದಾನ ನೀಡಿದ್ದಾರೆ. ಇನ್ನು ನಾಲ್ಕು ತಿಂಗಳಲ್ಲಿ ಅವರಿಂದಲೇ ಕಟ್ಟಡ ಉದ್ಘಾಟನೆ ಮಾಡಿಸಲಾಗುವುದು. ಇದಲ್ಲದೆ ನಾಡಕಚೇರಿ ನಿರ್ಮಾಣವಾಗುತ್ತಿದ್ದು, ಅದರ ಸಮೀಪ 25 ಲಕ್ಷ ರೂ ವೆಚ್ಚದಲ್ಲಿ ಹೈಟೆಕ್ ಶೌಚಗೃಹ ಮಾಡಲಾಗುವುದು. ಸರ್ಕಾರಿ ಶಾಲೆಗೆ ಸೇರಿದ ಜಾಗ ಸಿಕ್ಕರೆ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಮಳೆ ನಿಂತ ಬಳಿಕ ಬಸ್ ನಿಲ್ದಾಣ ಕಾಮಗಾರಿ ನಡೆಯಲಿದೆ. ಇದಲ್ಲದೆ ಬಸರಾಳಿನಿಂದ ಮುತ್ತೇಗೆರೆವರೆಗೆ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ ನಿಗದಿಪಡಿಸಲಾಗಿದ್ದು, ಟೆಂಡರ್ ಕೂಡ ಆಗಿದೆ. ಅಂತೆಯೇ ಚಿಕ್ಕಮಂಡ್ಯದಿಂದ ಬಿಳದೇಗಿಲುವರೆಗಿನ ರಸ್ತೆಯನ್ನು 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಮಾತ್ರವಲ್ಲದೆ ಬಸರಾಳು ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ಎಸ್ಸಿ ಕಾಲನಿ, 20 ಲಕ್ಷ ರೂ ವೆಚ್ಚದಲ್ಲಿ ಸ್ಮಶಾನ ಹಾಗೂ 1 ಕೋಟಿ ರೂ ವೆಚ್ಚದಲ್ಲಿ ಬಸರಾಳು ಕೇಂದ್ರದ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಇನ್ನು ಹೇಮಾವತಿ ನಾಲೆ ಆಧುನೀಕರಣ, ಕೆರೆ ಕೋಡಿ ಪುನಶ್ಚೇತನ ಸೇರಿದಂತೆ ಬಸರಾಳು ಭಾಗಕ್ಕೆ 30 ಕೋಟಿ ರೂ ವೆಚ್ಚದ ಅಭಿವೃದ್ಧಿ ಕೆಲಸ ನಡೆಯಲಿದೆ. ಬಹುಶಃ ಬಸರಾಳಿನ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಪ್ರಮಾಣದ ಅನುದಾನ ನೀಡಲಾಗಿದೆ. ಆದರೂ ವಿಪಕ್ಷಗಳು ಟೀಕೆ ಮಾಡುತ್ತವೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ಕೆಲಸವನ್ನು ನಾವು ಮಾಡೋಣ. ಅದೇ ರೀತಿ ಕೆಲಸ ಮಾಡುವವರನ್ನು ಜನರು ಬೆಂಬಲಿಸಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ಕೃಷಿ ನಿರ್ದೇಶಕಿ ಕೆ.ಮಾಲತಿ, ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಕಾಂಗ್ರೆಸ್ ಮುಖಂಡರಾದ ಕಂಬದಹಳ್ಳಿ ಪುಟ್ಟಸ್ವಾಮಿ, ಅಪ್ಪಾಜಿಗೌಡ, ಕೆಂಚನಹಳ್ಳಿ ರಾಜು ಇತರರಿದ್ದರು. ಇದೇ ವೇಳೆ ರೈತರಿಗೆ ಕೃಷಿ ಇಲಾಖೆಯಿಂದ ಪರಿಕರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net