

ಮಂಡ್ಯ: ಬಿ.ಹೊಸೂರು ಕಾಲನಿಯಲ್ಲಿ ಆಸ್ಪತ್ರೆ, ಹಲವು ಶೈಕ್ಷಣಿಕ ಸಂಸ್ಥೆಗಳಿರುವುದರಿಂದ ಶಿಕ್ಷಣ ಮತ್ತು ಆರೋಗ್ಯ ಕಾಶಿಯಾಗುತ್ತಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂನ ಬಿ.ಹೊಸೂರು ಕಾಲನಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂದುವರೆದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಂದೆ ಮಂಡ್ಯದ ಭೂಪಟದಲ್ಲಿ ಬಿ.ಹೊಸೂರು ಕಾಲನಿ ತನ್ನದೇ ಆದ ಮಹತ್ವ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಇನ್ನೂ ಹಲವು ಯೋಜನೆ ಜಾರಿಯಾಗಲಿದ್ದು, ಇದಕ್ಕೆ ಸ್ಥಳೀಯ ಮುಖಂಡರಿಂದ ಉತ್ತಮ ಸಹಕಾರ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಮೂರು ಜಿಲ್ಲೆಯಿಂದ ಗರ್ಭಿಣಿಯರು ಬರುತ್ತಾರೆ. ಪರಿಣಾಮ ಎಲ್ಲರಿಗೂ ಸೌಲಭ್ಯ ಒದಗಿಸಲು ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿ.ಹೊಸೂರು ಕಾಲನಿಯಲ್ಲಿ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆ ಪೂರ್ಣಗೊಳಿಸಲು ಇನ್ನೂ 7.5 ಕೋಟಿ ರೂ ಅನುದಾನದ ಅವಶ್ಯಕತೆ ಇತ್ತು. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಕೆಡಿಪಿ ಸಭೆ ಮಾಡಿದ್ದ ಸಮಯದಲ್ಲಿ ಆಸ್ಪತ್ರೆಗೆ ಅನುದಾನ ಕೊಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಅನುದಾನ ಬಂದಿದೆ. ಇದೀಗ ಮುಂದುವರೆದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ರಸ್ತೆ ಮತ್ತು ಸಿಸಿ ಕ್ಯಾಮೆರಾ, ಫುಟ್‌ಪಾತ್, ಸ್ವಾಗತ ಕಮಾನು ಸೇರಿದಂತೆ ಹಲವು ಕಾಮಗಾರಿ ಮಾಡಲಾಗುತ್ತಿದೆ. ಇನ್ನು ಆರು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು. ಈ ಆಸ್ಪತ್ರೆಯಿಂದ ಹಲವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಚಿಕ್ಕಮಂಡ್ಯದಿಂದ ಬಿ.ಹೊಸೂರು ಕಾಲನಿಯವರೆಗೆ 11 ಕೋಟಿ ರೂ ವೆಚ್ಚದಲ್ಲಿ ಅತ್ಯುತ್ತಮ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ನಡುವೆಯೂ ಇಷ್ಟೊಂದು ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಅಬ್ದುಲ್ ಕಲಾಂ ವಸತಿ ಶಾಲೆಗೆ 30 ಕೋಟಿ ರೂ ಬಿಡುಗಡೆಯಾಗಲಿದೆ. ಪ್ರಸ್ತುತ ಖಾಸಗಿ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಮುಂದೆ ಬಿ.ಹೊಸೂರು ಕಾಲನಿಗೆ ಸ್ಥಳಾಂತರ ಮಾಡಲಾಗುವುದು. ಶಾಲೆಗೆಂದು ಐದು ಎಕರೆ ಜಾಗವನ್ನು ಮೀಸಲಿಡಲಾಗಿದ್ದು, ಶೀಘ್ರವೇ ಭೂಮಿ ಪೂಜೆ ಮಾಡಲಾಗುವುದು ಎಂದು ವಿವರಿಸಿದರು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ದೊಡ್ಡಯ್ಯ, ಮುಖಂಡರಾದ ಅಶೋಕ್, ಬೋರೇಗೌಡ, ಚಂದ್ರು ಇತರರಿದ್ದರು.