ಪರಿಸರ ನಾಶದಿಂದ ಜೀವರಾಶಿಗಳ ವಿನಾಶ: ಎನ್‌ಎಸ್‌ಎಸ್ ಕಾರ್ಯಾಕ್ರಮಾಧಿಕಾರಿ ಪ್ರತಾಪ್ ಲಿಂಗಯ್ಯ ಆತಂಕ

Bhoomi Dina)
Published on

ಮಂಡ್ಯ: ಭೂಮಿಯಲ್ಲಿನ ಸಂಪತ್ತನ್ನು ಇತಮಿತವಾಗಿ ಬಳಸದಿದ್ದರೆ ಜೀವರಾಶಿಗಳು ವಿನಾಶಗೊಳ್ಳುತ್ತವೆ ಎಂದು ಎನ್‌ಎಸ್‌ಎಸ್ ಕಚೇರಿಯ ರಾಜ್ಯ ಕಾರ್ಯಾಕ್ರಮಾಧಿಕಾರಿ ಪ್ರತಾಪ್ ಲಿಂಗಯ್ಯ ಹೇಳಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು, ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ, ಯುವ ಮುನ್ನಡೆ ಮಂಗಲ, ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಮಂಗಲ, ಕಾಲೇಜಿನ ಎನ್‌ಎಸ್‌ಎಸ್ ಘಟಕ, ಪ್ರಾದೇಶಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಭೂಮಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲರ ಜವಬ್ದಾರಿ, ಕರ್ತವ್ಯ ಭೂಮಿ ಮತ್ತು ಜೀವಸಂಕುಲಗಳನ್ನು ಸಂರಕ್ಷಣೆ ಮಾಡುವುದಾಗಿದೆ. ತಮ್ಮ ಕೈಲಾದಷ್ಟು ಪರಿಸರ ರಕ್ಷಣೆ, ಬೆಳೆವಣಿಗೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸೌರಮಂಡಲದಲ್ಲಿ ಜೀವರಾಶಿಗಳ ಆಶ್ರಯತಾಣ ಭೂಮಿ ಗ್ರಹವಾಗಿದೆ. ಹಸಿರುವನ ಹೆಚ್ಚಿಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿದೆ. ವಿಶ್ವ ಭೂಮಿ ದಿನ ಆಚರಣೆ ಮೂಲಕ ಅರಿವು ಹೆಚ್ಚಿಸಬೇಕಿದೆ. ಭೂಮಿ ಉಳಿಸಿ, ಸಂರಕ್ಷಣೆ ಮಾಡುವ ಸಂದೇಶಗಳನ್ನು ಜನತೆಗೆ ನೀಡಬೇಕು. ಇದರೊಟ್ಟಿಗೆ ಇಂದು ನಾವು ವಿಧಾನಸಭಾ ಚುನಾವಣೆಯ ದಿನಗಳಲ್ಲಿದ್ದೇವೆ. ಮೊದಲ ಬಾರಿ ಮತದಾನ ಮಾಡುವ ಮತದಾರರಿಗೆ ಮತದಾನದ ಮಹತ್ವ ಮತ್ತು ಅರಿವು ಹೆಚ್ಚಿಸಬೇಕಿದೆ ಎಂದು ಕಿವಿಮಾತೇಳಿದರು.

ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಯೋಗೇಶ್ ಮಂಗಲ ಮಾತನಾಡಿ, ಸೌರಮಂಡಲದಲ್ಲಿ ಹೆಚ್ಚು ಮಹತ್ವ ಹೊಂದಿರುವ ಗ್ರಹಗಳಲ್ಲಿ ಭೂಮಿ ಪ್ರಮುಖವಾಗಿದೆ. ವೈವಿದ್ಯಮಯ ಜೀವಸಂಪತ್ತು, ಮನುಕುಲ ಸಂರಕ್ಷಣೆಯ ಜವಬ್ದಾರಿ ಅರಿತು, ಭೂಮಿ ರಕ್ಷಣೆ ಮಾಡಬೇಕಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ದಶರಥ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಭಾಗ್ಯ, ಸಂಪನ್ಮೂಲ ವ್ಯಕ್ತಿ ಅರುಣಕುಮಾರಿ ಇತರರಿದ್ದರು. ಇದೇ ಸಂದರ್ಭದಲ್ಲಿ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಿ ಪ್ರತಿಜ್ಞಾವಿಧಿ ಬೋಧಿಸಿ ಸ್ವೀಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net