ಸತ್ಕಾರ್ಯ ಮಾಡುವವರಿಗೆ ಪ್ರೋತ್ಸಾಹ: ಕಂಚಿ ಕಾಮಕೋಟಿ ಶ್ರೀ ಆಶೀರ್ವಚನ

kanchi
Published on

ವಿಜಯವಾಣಿ ಸುದ್ದಿಜಾಲ ಧರ್ಮಸ್ಥಳ

ದೇಶಪ್ರೇಮದೊಂದಿಗೆ ಪ್ರಾಮಾಣಿಕತೆ, ಕಲೆ, ಸೌಂದರ್ಯವನ್ನು ಉಳಿಸಿ, ಬೆಳೆಸಬೇಕು. ಆಲಸ್ಯ, ಆಡಂಬರ, ಕಾಲಹರಣ ಸಲ್ಲದು. ಎಲ್ಲರೂ ಶ್ರಮಪಟ್ಟು ಕೆಲಸ ಮಾಡಬೇಕು. ಸತ್ಕಾರ್ಯ ಮಾಡುವವರನ್ನು ಪ್ರೋತ್ಸಾಹಿಸಿ ಗೌರವಿಸಬೇಕು ಎಂದು ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರ ವಿಜಯೇಂದ್ರ ಸರಸ್ವತೀ ಶಂಕರಾಚಾರ್ಯ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದಲ್ಲಿ ಅನ್ನಪೂರ್ಣ ಭೋಜನಾಲಯದ ಮೇಲಂತಸ್ತಿನಲ್ಲಿ ಸುಸಜ್ಜಿತ ಆಸನ ಸೌಲಭ್ಯವನ್ನೊಳಗೊಂಡಿರುವ ವಿಸ್ತೃತ ಭೋಜನಾಲಯವನ್ನು ಗುರುವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಪರಸ್ಪರ ಪ್ರೀತಿ, ವಿಶ್ವಾಸ ಗೌರವದಿಂದ ಉದಾರ ಹೃದಯಿಗಳಾಗಿ ಸಾರ್ಥಕ ಜೀವನ ಮಾಡಿದರೆ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ. ಕೇರಳದಲ್ಲಿ ಅಭಿಮಾನ, ತಮಿಳುನಾಡಿನಲ್ಲಿ ಅಧ್ಯಯನ, ಆಂಧ್ರದಲ್ಲಿ ಆಚಾರ ಮತ್ತು ಕರ್ನಾಟಕದಲ್ಲಿ ಅನ್ನದಾನ ಶ್ರೇಷ್ಠವಾಗಿದೆ ಎಂದು ಸ್ವಾಮೀಜಿ ಹೇಳಿದರು.

ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಆಶೀವರ್ಚನ ನೀಡಿದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದ್ದರು.

ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಡಿ.ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ಡಿ.ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಅನ್ನಪೂರ್ಣ ಭೋಜನಾಲಯದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ವಂದಿಸಿದರು. ಡಾ.ಶ್ರೀಧರ ಭಟ್ ಮತ್ತು ಸುನೀಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರೀತಿ, ವಿಶ್ವಾಸ ಮುಖ್ಯ

ಆರ್ಥಿಕ ದಾರಿದ್ರ್ಯಮತ್ತು ಮನೋ ದಾರಿದ್ರ್ಯನಿರ್ಮೂಲನೆಯಾಗಿ ರಾಜಕೀಯ ರಹಿತವಾದ ಸಾಮಾಜಿಕ ನೇತೃತ್ವದಿಂದ ಲೋಕ ಕಲ್ಯಾಣವಾಗುತ್ತದೆ. ಎಲ್ಲರೂ ಸತ್ಯ, ಧರ್ಮ ಮತ್ತು ನ್ಯಾಯ ಮಾರ್ಗದಲ್ಲಿ ನಡೆದು ಅಧಿಕಾರ, ಮಂತ್ರಶಕ್ತಿ ಮತ್ತು ಆರ್ಥಿಕ ಶಕ್ತಿಯ ಸದುಪಯೋಗವಾಗಬೇಕು. ಭಕ್ತಿ ಮತ್ತು ಧರ್ಮಕ್ಕಿಂತಲೂ ಪರಸ್ಪರ ಪ್ರೀತಿ ಮತ್ತು ವಿಶ್ವಾಸವೇ ಮುಖ್ಯ. ಧರ್ಮಸ್ಥಳದ ಅನ್ನದಾನ ಮತ್ತು ನ್ಯಾಯದಾನ ಪದ್ಧತಿಯನ್ನು ಶ್ಲಾಘನೀಯ ಎಂದು ಕಂಚಿ ಕಾಮಕೋಟಿ ಶ್ರೀ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net