ಭೋಗಲಿಂಗೇಶ್ವರ ಅದ್ಧೂರಿ ಪಲ್ಲಕ್ಕಿ ಉತ್ಸವ

oppo_2
oppo_2
Published on

ಕಲಬುರಗಿ: ಮೇಳಕುಂದಾ ಬಿ ಗ್ರಾಮದಲ್ಲಿ ಶ್ರೀ ಭೋಗಲಿ‌ಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಅದ್ಧೂರಿ ಪಲ್ಲಕ್ಕಿ ಉತ್ಸವ ಸಹಸ್ರಾರು ಭಕ್ತರ ಮಧ್ಯೆ ಶ್ರೀ ಶಶಿಕುಮಾರ್ ದೇವರು ನೇತೃತ್ವದಲ್ಲಿ ಸಡಗರ, ಸಂಭ್ರಮದಿಂದ ಗುರುವಾರ ನೆರವೇರಿತು.

ಸಹಸ್ರಾರು ಭಕ್ತರ ಜೈ ಘೋಷಗಳು, ಭಜನಾ ಮೇಳಗಳು, ನಾಸಿಕ್ ಡೋಲುಗಳು, ಹಲಗೆ ವಾದ್ಯ ಮೇಳಗಳೊಂದಿಗೆ ಭೋಗೇಶ್ವರ ದೇವಸ್ಥಾನದಿಂದ ಆರಂಭವಾಗಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ, ಪುನಃ ದೇವಸ್ಥಾನ ತಲುಪಿತು.

ನೂರಾರು ಮಹಿಳೆಯರು ಕಲಶ ಹೊತ್ತು ಹೆಜ್ಜೆ ಹಾಕಿದರು. ಕೇಸರಿ ಶಾಲು, ಟೋಪಿ ಧರಿಸಿದ ಯುವಕರು ಚಳ್ಳಮ್, ಡೋಲಿನ ನಾಧಕ್ಕೆ ಹೆಜ್ಜೆ ಹಾಕಿ, ಭಕ್ತಿ ಅರ್ಪಿಸಿದರು. ಎಲ್ಲೆಡೆ ಕೇಸರಿ ಧ್ವಜ ರಾರಾಜಿಸಿದವು. ಪುರವಂತರ ವೀರಭದ್ರ ಕುಣಿತ ಮೈ ಜುಮ್ಮೆನಿಸಿತು.

ಪುರಾಣ ಮಂಗಲ: 11 ದಿನಗಳವರೆಗೆ ಶ್ರೀ ಭೋಗಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಿವಕುಮಾರ್ ಮಹಾಸ್ವಾಮೀಜಿ ನೇತೃತ್ವದಲ್ಲಿ ನಡೆದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಮಹಾಪುರಾಣವು ಬುಧವಾರ ಸಂಜೆ ಮಹಾಮಂಗಲವಾಯಿತು.

ಸಾವಿರಾರು ಮಹಿಳೆಯರು ಏಕಕಾಲಕ್ಕೆ ದೀಪಜ್ಯೋತಿ ಬೆಳಗಿಸುವ ಮೂಲಕ ಮಹಾಮಂಗಲಗೊಳಿಸಲಾಯಿತು.

ಮುಕ್ತಂಪುರ ಗದ್ದುಗೆ ಮಠದ ಶ್ರೀ ಚರಲಿಂಗ ಮಹಾಸ್ವಾಮೀಜಿ ಮಾತನಾಡಿ, ಪುರಾಣ, ಪ್ರವಚನ, ಧರ್ಮಕಾರ್ಯಗಳು  ಸನ್ಮಾರ್ಗದಲ್ಲಿ ಕೊಂಡ್ಯೊಯ್ಯುತ್ತವೆ. ಗುರುವಿನ ಮಾರ್ಗದಲ್ಲಿ ಭಕ್ತಿಯಿಂದ ಧರ್ಮಕಾರ್ಯದಲ್ಲಿ ಭಾಗವಹಿಸಿ, ಜ್ಞಾನ ಮಾರ್ಗವನ್ನು ಹಿಡಿಯಬೇಕು ಎಂದು ಹೇಳಿದರು.

ಶ್ರೀ ಮೃತ್ಯುಂಜಯ ದೇವರು, ಶ್ರೀ ಷಡಕ್ಷರಿ ದೇವರು, ಶ್ರೀ ನಿರುಪಾದಿ ದೇವರು ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ಪುರಾಣ, ಪ್ರವಚನಗಳು ಗುರುವಿನ ಮಾರ್ಗದಲ್ಲಿ ಸಾಗಲು ಪ್ರೇರಣೆ ನೀಡುತ್ತವೆ. ಯುವಕರು ದುಶ್ಚಟ ಬಿಟ್ಟು, ಹಠ ತೊಟ್ಟು ದಿಟ್ಟ ನಡೆಯೊಂದಿಗೆ ಸಾಗಬೇಕು. ಸಮೃದ್ಧ ಗ್ರಾಮ ನಿರ್ಮಾಣಕ್ಕೆ ಶಕ್ತಿ ತುಂಬಬೇಕು. ಸತ್ಕಾರ್ಯಗಳು ನಿರಂತರವಾಗಿ ಸಾಗಲಿ. | ಶಶಿಕುಮಾರ ದೇವರು, ಮೇಳಕುಂದಾ ಬಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net