

ಹಿರಿಯೂರು: ಸರ್ವರಿಗೂ ಸಮಪಾಲು-ಸಮಬಾಳು ಎಂಬ ಆಶಯದ ಸಂವಿಧಾನ ರಚಿಸಿದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ, ಹೋರಾಟ, ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಡಿ.ಸುಧಾಕರ್ ಹೇಳಿದರು.
ಭಾರತೀಯ ಎಜುಕೇಷನ್ ಮತ್ತು ಕಲ್ಚರಲ್ ಅಸೋಶಿಯೇಷನ್ ಮತ್ತು ಎಸ್‌ಆರ್‌ಪಿ ಕಾಲೇಜು ವತಿಯಿಂದ ನಗರದ ಶ್ರೀರಂಗನಾಥ ಪಿಯು ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಿಇಟಿ, ನೀಟ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಂದೆ-ತಾಯಿ, ಗುರು-ಹಿರಿಯನ್ನು ಗೌರವಿಸಬೇಕು. ವ್ಯಾಸಂಗದ ಅವಧಿಯಲ್ಲಿ ಸಮಯ ವ್ಯರ್ಥ ಮಾಡದೆ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ರಮಾನಂದ ಸ್ವಾಮೀಜಿ ಮಾತನಾಡಿ, ಶಿಕ್ಷಣ ಎಂಬುದು ಹುಲಿಯ ಹಾಲಿನಂತೆ, ಕುಡಿದವನು ಘರ್ಜಿಸಲೇ ಬೇಕು ಎಂದು ಅಂಬೇಡ್ಕರ್ ವಾಣಿಯನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಲು ಅನುಸರಿಸಬೇಕಾದ ಮತ್ತು ಅಗತ್ಯವಾಗಿ ಬದಲಿಸಿಕೊಳ್ಳ ಬೇಕಾದ ಅಂಶಗಳನ್ನು ಮಕ್ಕಳಿಗೆ ತಿಳಿಸಿದರು.
ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ವೀರಕರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಗುರು ಬಸವರಾಜ್ ಮಾತನಾಡಿದರು. ನಗರಸಭೆ ಸದಸ್ಯರಾದ ಶಿವರಂಜಿನಿ, ಸಣ್ಣಪ್ಪ, ಜಿಪಂ ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಮಹೇಶ್, ಶಿವಣ್ಣ, ಪ್ರಾಂಶುಪಾಲ ಜಿ.ಎಂ.ರಘುನಾಥ್ ಗೌಡ, ಉಪನ್ಯಾಸಕ ನಾಗರಾಜ್ ಇತರರಿದ್ದರು.