ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ

Bhimanna naik speech
Published on

ಶಿರಸಿ: ಕ್ಷೇತ್ರದಲ್ಲಿ ತಮ್ಮ ಶೂನ್ಯ ಸಾಧನೆಯನ್ನ ಮುಚ್ಚಿಡಲು ಈಗ ಪರೇಶ್ ಮೇಸ್ತಾ ಪ್ರಕರಣವನ್ನ ಮತ್ತೆ ಬಿಜೆಪಿ ಅಭ್ಯರ್ಥಿ ಮುನ್ನೆಲೆಗೆ ತಂದು ಐಜಿಯವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಚಕಾರ ಎತ್ತದ ಬಿಜೆಪಿಯನ್ನ ಹಾಗೂ ಬಿಜೆಪಿ ಅಭ್ಯರ್ಥಿಯನ್ನ ದೂರವಿಡಬೇಕಿದೆ ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ ಕರೆನೀಡಿದರು.

ದೊಡ್ಮಳ್ಳಿ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪರೇಶ್ ಮೇಸ್ತಾ ಪ್ರಕರಣದಲ್ಲಿ ಬೆಂಕಿ ಹಚ್ಚಿ ಗಲಾಟೆ ಎಬ್ಬಿಸಿ ಪೊಲೀಸ್ ಜೀಪ್ ಹತ್ತಿ ಓಡಿ ಹೋದವರು ಯಾರು? ಪ್ರಕರಣದಲ್ಲಿ ಐಜಿ ಮೇಲೆ ಆರೋಪಿಸುವ ಕಾಗೇರಿಯವರು, ತಮ್ಮದೇ ಸರ್ಕಾರವಿದ್ದಾಗ ಯಾಕೆ ಅವರ ವಿರುದ್ಧ ತನಿಖೆ ಮಾಡಿಸಲಿಲ್ಲ? ಹತಾಶೆಯಿಂದ ಈಗ ಅವರು ಮಾತನಾಡುತ್ತಿದ್ದಾರೆ. ಪ್ರಚೋದನೆ ಕೊಟ್ಟು ಯುವಕರನ್ನ ಜೈಲಿಗೆ ಕಳುಹಿಸಿದರು. ಈಗಲೂ ಯುವಕರು ಕೋರ್ಟಿಗೆ ಅಲೆದಾಡುತ್ತಿದ್ದಾರೆ. ಅಂಥವರಿಗೆ ಈ ಬಾರಿಯ ಚುನಾವಣೆಯಲ್ಲ ಪಾಠ ಕಲಿಸಬೇಕಿದೆ ಎಂದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಕಾಗೇರಿ ಈಗ ಚುನಾವಣೆ ಬಂದಮೇಲೆ ಮಾತನಾಡಲು ಶುರು ಮಾಡಿದ್ದಾರೆ. ಈ ಮುಂಚೆ ಇತಿಮಿತಿಯಲ್ಲಿ ಮಾತನಾಡುತ್ತಿದ್ದರು. ಈಗ ಭಯವಾಗಿದೆ, ಸ್ವಲ್ಪ ನರ್ವಸ್ ಆಗಿದ್ದಾರೆ. ಹೀಗಾಗಿ ಸದ್ಯ ಬಾಯಿಗೆ ಬಂದದ್ದನ್ನ ಮಾತನಾಡುತ್ತಿದ್ದಾರೆ ಎಂದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ವೈದ್ಯಳಾಗಿ ಓರ್ವ ಗಾಯಾಳುವಿಗೆ ಸಹಾಯ ಮಾಡಿದರೂ ಯಾಕೆ‌ ಮಾಡಿದಿರಿ ಎಂದು ಕೇಳುತ್ತಾರೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಹಿಂದುಗಳ ಮೇಲೆ ಕೇಸ್ ಹಾಕಿದ್ದಾರೆ ಎನ್ನುತ್ತಾರೆ. ಐಜಿ ಹೇಮಂತ್ ನಿಂಬಾಳ್ಕರ್ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿದ್ದರು ಎನ್ನುತ್ತಾರೆ. ಹಿಂದುಳಿದ ವರ್ಗದ ಯುವಕರ ಮೇಲೆ ಮಾತ್ರ ಕೇಸ್ ಆಗಿದೆ. ಅವರು ಮಾತ್ರ ಹಿಂದೂನಾ? ಹಾಗಿದ್ದರೆ ಕಾಗೇರಿ ಹಿಂದು ಅಲ್ವಾ? ಅವರ ಮೇಲೆ ಯಾಕೆ ಕೇಸ್ ಆಗಿಲ್ಲ? ಅವರು ಮತ್ತು ಐಜಿ ನಿಂಬಾಳ್ಕರ್ ಜೊತೆ ಏನು ಸಂಬಂಧ ಇತ್ತು? ‌ಎಷ್ಟೇ ನನ್ನ ಬಗ್ಗೆ ಟೀಕಿಸಿದರೂ ನಾನು ಜನರ ಪರವಾಗಿ ಕೆಲಸ ಮಾಡವುದನ್ನ ಮುಂದುವರಿಸುತ್ತೇನೆ. ಸತ್ಯ, ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ್ರು, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟೇಶ್ ಹೆಗಡೆ ಹೊಸಬಾಳೆ,ಪ್ರಮುಖರಾದ ರಮೇಶ ದುಬಾಶಿ, ಜ್ಯೋತಿ ಪಾಟೀಲ್, ಮಾಧವ ರೇವಣಕರ್, ದೊಡ್ನಳ್ಳಿ ಗ್ರಾಪಂ ಅಧ್ಯಕ್ಷ ತಿರುಮಲೇಶ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net