ಪರಿಹಾರ ಕಾರ್ಯ ಚುರುಕುಗೊಳಿಸಿ

VJP 30-2
Published on

ವಿಜಯಪುರ: ಭೀಮಾ ನದಿ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ಸಿಂದಗಿ ತಾಲೂಕಿನ ಬಗಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಕೃಷಿ ನಿರ್ದೇಶಕ ಬಿ.ವೈ. ಶ್ರೀನಿವಾಸ ನೇತೃತ್ವದ ತಂಡ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.

ಜಿಲ್ಲೆಯ ಬಗಲೂರು, ಕುಳೆಕುಮಟಗಿ, ಶಿರಸಗಿ, ಹಾವಳಗಿ ಹಾಗೂ ಕಕ್ಕಳಮೇಲಿ ಗ್ರಾಮಗಳ ರೈತರ ತಾಕುಗಳಿಗೆ ಭೇಟಿ ನೀಡಿ ಬೆಳೆಹಾನಿ ವೀಕ್ಷಿಸಿದ ನಂತರ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಬೆಳೆ ಹಾನಿ ಕುರಿತಂತೆ ಸಭೆ ನಡೆಸಿ ನಿಖರ ಮಾಹಿತಿ ಪಡೆದರು.

ಬೆಳೆಹಾನಿಗೊಳಗಾಗಿ ಸಂಕಷ್ಟದಲ್ಲಿರುವ ರೈತರಿಗೆ ತ್ವರಿತವಾಗಿ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಬೆಳೆ ಹಾನಿ ಸಮೀಕ್ಷೆ ಮಾಡುವಾಗ ನಿಖರ ಹಾಗೂ ವಾಸ್ತವಾಂಶವುಳ್ಳ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು. ಸರ್ಕಾರದ ಮಾರ್ಗಸೂಚಿಯನ್ವಯ ರೈತರಿಗೆ ಪರಿಹಾರ ಕಲ್ಪಿಸುವ ಕೆಲಸವನ್ನು ಸಮರೋಪಾದಿಯಲ್ಲಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ತೊಗರಿ, ಹತ್ತಿ, ಕಬ್ಬು, ಮುಸುಕಿನಜೋಳ, ಸೂರ್ಯಕಾಂತಿ, ಕಡಲೆ, ಹಿಂಗಾರಿಜೋಳ, ಶೇಂಗಾ ಹಾಗೂ ಸಜ್ಜೆ ಸೇರಿ ಒಟ್ಟು 2.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಕುರಿತು ಜಂಟಿ ನಿರ್ದೇಶಕ ವಿಲಿಯಂ ರಾಜಶೇಖರ ಮಾಹಿತಿ ನೀಡಿದರು.

ಉಪಕೃಷಿ ನಿರ್ದೇಶಕ ಪ್ರಕಾಶ ಚವಾಣ್ ಹಾಗೂ ಎನ್. ರಾಘವೇಂದ್ರ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net