

ವಿಜಯವಾಣಿ ಸುದ್ದಿಜಾಲ ಧಾರವಾಡ
ಜ್ಞಾನವಿಹಾರದ ಡಾ.ಬಿ.ಆರ್.ಅಂಬೇಡ್ಕರ್ ಎಜ್ಯುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹೊಸ ವರ್ಷದ ಜತೆಗೆ ಭೀಮಾ ಕೋರೆಗಾಂವ 207ನೇ ವಿಜಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಜ.1ರಂದು ನಗರದ ಜ್ಞಾನ ಬುದ್ಧ ವಿಹಾರದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಎಫ್.ಎಚ್. ಜಕ್ಕಪ್ಪನವರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6ಗಂಟೆಗೆ ಬುದ್ಧ ರಕ್ಕಿಥ ವಸತಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಭೀಮಾ ಕೋರೆಗಾಂವ ವೀರಯೋಧರ ಸ್ಮಾರಕಕ್ಕೆ ಸಲಾಮಿ ಗೌರವ ಸಲ್ಲಿಕೆ ಹಾಗೂ ಅತಿಥಿಗಳಿಂದ ಗೌರವಾರ್ಪಣೆ ನೆರವೇರಲಿದೆ. ಬಳಿಕೆ 7 ಗಂಟೆಗೆ ಏರ್ಪಡಿಸಿರುವ ಸಭಾ ಕಾರ್ಯಕ್ರಮವನ್ನು ಸಮಾಜ ಸೇವಕಿ ಸುಶೀಲಮ್ಮ ಚಲವಾದಿ ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ ಪ್ರಕಾಶ ಅಂಬೇಡ್ಕರ ಅಧ್ಯಕ್ಷತೆ ವಹಿಸಲಿದ್ದು, ಟ್ರಸ್ಟಿಗಳಾದ ಜಿ.ಎಚ್. ನಾಗಾವಿ, ಪ್ರೊ. ಕೆ.ಜಿ. ಆಡೂರ, ಸಂತೋಷ ಜಕ್ಕಪ್ಪನವರ ಉಪಸ್ಥಿತರಿರುವರು ಎಂದರು.
ರಾತ್ರಿ 8 ಗಂಟೆಗೆ ಸದಾಶಿವ ಎಂ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಡಾ. ಅನಿಲ ಮೇತ್ರಿ ಹಾಗೂ ಬಳಗದಿಂದ ಬುದ್ಧ ಮತ್ತು ಭೀಮ ಗೀತೆಗಳು, ಪ್ರಕಾಶ ಮಲ್ಲಿಗವಾಡ ನಿರ್ದೇಶನದಲ್ಲಿ ಭಾಗ್ಯಶ್ರೀ ಗಾಳೆಮ್ಮನವರ, ಪ್ರವಿಣ ಬಡಿಗೇರ ತಂಡದಿಂದ ನೃತ್ಯ ಪ್ರದರ್ಶನ, ಸಿದ್ಧರಾಮ ಹಿಪ್ಪರಗಿ ಹಾಗೂ ಕಲಾವಿದರು ಭೀಮ ರೂಪಕ ಪ್ರದಶಿರ್ಸಲಿದ್ದಾರೆ ಎಂದರು.
1818ರಲ್ಲಿ ಮಹಾರಾಷ್ಟ್ರದ ಪೇಶ್ವೆಗಳ ಆಡಳಿತದ ಕಾಲದಲ್ಲಿ ಸಾಮಾಜಿಕ ಅಸಮತೋಲನದ ವಿರುದ್ಧ ದಮನಿತ ಸಮುದಾಯ ಸಿಡಿದೆದ್ದು ವಿಜೇತರಾದ ದಿನ ಇದಾಗಿದೆ. ಈ ಯುದ್ದದಲ್ಲಿ ಹೋರಾಡಿ ಹುತಾತ್ಮರಾದ ಮಹಾ ಯೋಧರ ಸ್ಮಾರಕಕ್ಕೆ ಪ್ರತಿ ವರ್ಷ ಜ.1 ರಂದು ಡಾ. ಬಾಬಾಸಾಹೇಬ ಅಂಬೇಡ್ಕರ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸುವ ಸಂಪ್ರದಾಯ ಆರಂಭಿಸಿದ್ದು ಇತಿಹಾಸ. ಈ ಸಂಪ್ರದಾಯದಂತೆ ಡಿ. 31ರಂದು ಮಧ್ಯರಾತ್ರಿ ಡಾ. ಬಾಬಾಸಾಹೇಬ ಅಂಬೇಡ್ಕರರ ಪ್ರತಿಮೆಗೆ ದೀಪ ಬೆಳಗಿಸಿ ಮಾಲಾರ್ಪಣೆ ಮಾಡುವ ಮೂಲಕ ಭೀಮಾ ಕೋರೆಗಾಂವ ವಿಜಯೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದರು.
ಸದಾಶಿವ, ಜಿ.ಎಚ್.ನಾಗಾವಿ, ಇತರರು ಇದ್ದರು.