ಕೋರೆಗಾಂವ್ ಹೋರಾಟ ಆತ್ಮಗೌರವಕ್ಕೆ ನಡೆದ ಯುದ್ಧ: ಸಾಹಿತಿ ಡಾ. ಕೃಷ್ಣಮೂರ್ತಿ ಚಮರಂ ಅಭಿಪ್ರಾಯ

Bhima Koregaon victory celebration Mandya
Published on

ಮಂಡ್ಯ: ಸ್ವಾಭಿಮಾನ ಮತ್ತು ಆತ್ಮಗೌರವಕ್ಕಾಗಿ ನಡೆದ ಯುದ್ಧವೇ ಭೀಮಾ ಕೋರೆಗಾಂವ್ ಹೋರಾಟ ಎಂದು ಸಾಹಿತಿ ಡಾ. ಕೃಷ್ಣಮೂರ್ತಿ ಚಮರಂ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿ ಮಂಡ್ಯ ಆಯೋಜಿಸಿದ್ದ 207ನೇ ವರ್ಷದ ಐತಿಹಾಸಿಕ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆದಿರುವ ಯುದ್ಧಗಳೆಲ್ಲವೂ ಮಣ್ಣು, ಹೊನ್ನು, ಹೆಣ್ಣು, ಅಧಿಕಾರ-ಪ್ರತಿಷ್ಠೆಗಾಗಿ ನಡೆದಿವೆ. ಆದರೆ ಸ್ವಾಭಿಮಾನ ಮತ್ತು ಆತ್ಮಗೌರವಕ್ಕಾಗಿ ನಡೆದ ಯುದ್ಧವೆಂದರೆ ಅದು ಭೀಮಾ ಕೋರೆಗಾಂವ್ ಯುದ್ಧ. ಇದು ಚರಿತ್ರಾರ್ಹ ಐತಿಹಾಸಿಕ ವಿಜಯೋತ್ಸವವಾಗಿದೆ ಎಂದು ನುಡಿದರು.

ಕ್ರಿ.ಶ.1818ರಲ್ಲಿ ಮನುವಾದಿ ಪೇಶ್ವೆಗಳ ಅಧೀನದಲ್ಲಿ ರಾಜ್ಯಾಡಳಿತ ನಡೆಯುತ್ತಿತ್ತು. ಈಗಿನ ಮಹಾರಾಷ್ಟ್ರ ವ್ಯಾಪ್ತಿ ಪ್ರದೇಶದಲ್ಲಿ, ಮನುಸ್ಮೃತಿ ಸಂವಿಧಾನದ ಅಡಿಯಲ್ಲಿ ರಾಜ್ಯಭಾರ ನಡೆಯುತ್ತಿತ್ತು, ಬ್ರಿಟಿಷರು ಭಾರತ ದೇಶದಲ್ಲಿ ಒಂದೊಂದೇ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಬರುತ್ತಿದ್ದ ಕಾಲಘಟ್ಟವದು. ಮನುವಾದಿ ಪೇಶ್ವೆಗಳ ಆಡಳಿತದಲ್ಲಿ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹರ್ ಸೈನಿಕರ ಧೈರ್ಯ, ಸಾಹಸ ಕೆಚ್ಚೆದೆಯ ಹೋರಾಟ ಆರಂಭಗೊಂಡು ಭೀಮಾನದೀ ತೀರದಲ್ಲಿ 2800 ಪೇಶ್ವೆ ಸೈನಿಕರನ್ನು 500 ಜನ ಮಹಾರ್‌ರೆಜಿಮೆಂಟ್ ಸೈನಿಕರು ಸೋಲಿಸಿದ ಐತಿಹಾಸಕ ಘಟನೆ ಇತಿಹಾಸ ಪುಟಗಳಲ್ಲಿ ಮುಚ್ಚಿಹೋಗಿತ್ತು. ಈ ಯುದ್ದದ ಗೆಲುವು ಭಾರತದೇಶದಲ್ಲಿ ಎಲ್ಲರಿಗೂ ಶಿಕ್ಷಣ, ಉದ್ಯೋಗ, ಆತ್ಮಗೌರವ, ಮಹಿಳೆಯರಿಗೆ ಸ್ವಾಭಿಮಾನ ತಂದುಕೊಡುವುದಲ್ಲದೆ, ಸಾಮಾಜಿಕ ಬದಲಾವಣೆಗೆ ಹೊಸ ದಿಕ್ಸೂಚಿಯನ್ನೇ ನೀಡಿತು, ಆಧುನಿಕ ಭಾರತ ನಿರ್ಮಾಣವಾಗಲು ಮುನ್ನುಡಿ ಬರೆಯಿತು ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಲಂಡನ್‌ನ ಲೈಬ್ರೆರಿಯಲ್ಲಿ ಅಧ್ಯಯನ ಮಾಡುವಾಗ ಈ ವಿಚಾರ ಪತ್ತೆಯಾಗಿ, ಮಹಾರಾಷ್ಟ್ರಕ್ಕೆ ಬಂದು ಈ ಸ್ಥಳನ್ನು ಶೋಧನೆ ಮಾಡಿ, ಪ್ರತಿ ವರ್ಷ ಜ.1ರಂದು ವೀರ ಮಹಾರ್ ಸೈನಿಕರಿಗೆ ನಮನ ಸಲ್ಲಿಸುತ್ತಿದ್ದರು ಎಂದು ತಿಳಿಸಿದರು.

ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಪ್ರತಿವರ್ಷ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಿಕೊಂಡು ನೂರಾರು ವರ್ಷಗಳಿಂದ ಬರುತ್ತಿದ್ದೇವೆ. ಆದರೆ ಶೋಷಿತ ಸಮುದಾಯ ಮೌಢ್ಯತೆಯಿಂದ ಹೊರಬಂದಿಲ್ಲ, ರಾಜಕೀಯ ಪ್ರಜ್ಞೆ ಬೆಳೆಸಿಕೊಂಡಿಲ್ಲ ಎಂದು ಎಚ್ಚರಿಸಿದರು.

ಆಚರಣೆ ಸಮಿತಿಯ ಪದಾಧಿಕಾರಿಗಳಾದ ಹೈಕೋರ್ಟ್ ವಕೀಲ ಎಂ.ಬಿ.ಹರಿಪ್ರಸಾದ್, ವೈದ್ಯ ಡಾ. ಪಿ.ಎಸ್.ರವೀಂದ್ರಮೂರ್ತಿ, ಶಿಕ್ಷಕಿ ಆಶಾರಾಣಿ, ವಿಶ್ವಜ್ಞಾನಿ ಬ್ಯಾಂಕ್‌ನ ಸಿ.ಬಿ.ಅರುಣಾಕ್ಷಿ, ಪ್ರೊ.ಮಹದೇವನ್, ಮುಕುಂದ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಅಂದಾನಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಶಿವಶಂಕರ್, ವಿಚಾರವಾದಿ ವಜ್ರಮುನಿ, ಪರಿವರ್ತನ್ ಸಂಸ್ಥೆಯ ತಗ್ಗಹಳ್ಳಿ ನಾಗರಾಜ್, ನಿರಂಜನ್ ಇತರರಿದ್ದರು.

ಇದೇ ಸಂದರ್ಭದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸ್ಮರಣಾರ್ಥ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ವೀರ ಮಹಾರ್‌ಸೈನಿಕರಿಗೆ ಕ್ಯಾಂಡಲ್ ಬೆಳಕಿನ ನಮನ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net