ಭೀಮಾ ಕೋರೆಗಾಂವ್ ಸ್ವಾಭಿಮಾನದ ಹೋರಾಟ

mysore
Published on

ಮೈಸೂರು: 18ನೇ ಶತಮಾನದಲ್ಲಿ ನಡೆದ ಭೀಮಾ ಕೋರೆಗಾಂವ್ ಸಾಮಾನ್ಯ ಯುದ್ಧವಲ್ಲ. ಅದು ಘನತೆ ಮತ್ತು ಸ್ವಾಭಿಮಾನದ ಹೋರಾಟ ಎಂದು ಮಾಜಿ ಮೇಯರ್ ಪುರುಷೋತ್ತಮ್ ಬಣ್ಣಿಸಿದರು.


ಜೈಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿ ವತಿಯಿಂದ ವಿಜಯನಗರ ರೈಲ್ವೆ ಗೇಟ್ ಬಳಿ ಆಯೋಜಿಸಿದ್ದ ಭೀಮಾ ಕೋರೆಗಾಂವ್ 206ನೇ ವರ್ಷದ ಸಂಭ್ರಮಾಚರಣೆ, ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಇದು ಯಾರ ವಿರುದ್ಧವೂ ಅಲ್ಲ, ಯಾರ ಪರವೂ ಅಲ್ಲ. ಮನುವಾದಿಗಳ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ದಲಿತರ ಸಾಂಸ್ಕೃತಿಕ ಪ್ರತಿರೋಧ. ಸ್ವಾಭಿಮಾನಕ್ಕಾಗಿ ನಡೆದ ಕದನವಾಗಿದೆ ಎಂದು ವಿಶ್ಲೇಷಿಸಿದರು.


ಭೀಮಾ ಕೋರೆಗಾಂವ್ ಯುದ್ಧ ದಲಿತರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಪೇಶ್ವೆಗಳ ನಡುವೆ ಭೀಮಾ ಕೋರೆಗಾಂವ್‌ನಲ್ಲಿ 1818ರ ಜನವರಿ 1ರಂದು ಐತಿಹಾಸಿಕ ಯುದ್ದ ನಡೆಯಿತು. ಈ ವೇಳೆ 500 ದಲಿತ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ಇಲ್ಲದೆ 28 ಸಾವಿರ ಇದ್ದ ಸೈನ್ಯದ ವಿರುದ್ಧ ನಿರಂತರ 12 ಗಂಟೆ ಕಾದಾಡಿದ ಸ್ಮರಣೀಯ ಕದನ. ಮಹರ್ ಸೈನಿಕರ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ ನಡೆದ ಯುದ್ಧ. ಅಷ್ಟು ದೊಡ್ಡ ಸಂಖ್ಯೆಯ ಪೇಶ್ವೆಪಡೆ ಮಹರ್ ಸೈನಿಕರ ಎದುರು ಮಂಡಿಯೂರಿತು ಎಂದು ಸ್ಮರಿಸಿದರು.


ಸ್ವಾಭಿಮಾನದ ಈ ಹೋರಾಟದ ಚರಿತ್ರೆಯನ್ನು ಮನುವಾದಿಗಳು ನಾಶ ಮಾಡಲು ಯತ್ನಿಸಿದ್ದರು. ಈ ಇತಿಹಾಸವನ್ನೂ ಮುಚ್ಚಿಟ್ಟಿದ್ದರು. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಈ ಕುರಿತು ಆಳವಾಗಿ ಅಧ್ಯಯನ, ಸಂಶೋಧನೆ ಮಾಡಿ ಮುಚ್ಚಿಟ್ಟಿದ್ದ ಚರಿತ್ರೆಯನ್ನು ಹೊರಜಗತ್ತಿಗೆ ಪರಿಚಯಿಸಿದರು ಎಂದರು.
ಭರತ ಖಂಡದಲ್ಲಿ ಅಧಿಕಾರ, ಆಸ್ತಿ, ಹೊನ್ನು, ಸಾಮ್ರಾಜ್ಯ ವಿಸ್ತರಣೆ ಹೀಗೆ ವಿವಿಧ ಕಾರಣಕ್ಕೆ ಯುದ್ಧಗಳು ನಡೆದಿವೆ. ಆದರೆ, ಸ್ವಾಭಿಮಾನಕ್ಕೆ ಯುದ್ಧ ನಡೆದಿರುವುದು ಭೀಮಾ ಕೋರೆಗಾಂವ್ ಕದನ ಮಾತ್ರ ಎಂದರು.


ಶತಮಾನಗಳಿಂದ ದಲಿತರ ಮೇಲೆ ದಬ್ಬಾಳಿಕೆ, ಶೋಷಣೆ, ದೌರ್ಜನ್ಯ ನಿರಂತರವಾಗಿ ನಡೆದಿವೆ. ಆಧುನಿಕ ಕಾಲದಲ್ಲೂ ಅದು ಮುಂದುವರಿದೆ. ಇದರ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.


ದೇಶದ ಮೂಲಪುರುಷರಿಗೆ ಅವಮಾನ, ಅಗೌರವ ತೋರುವ ಪ್ರವೃತ್ತಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಮಹಿಷ ಅವಹೇಳನ ಮಾಡಲಾಗಿದೆ. ಇದು ಖಂಡನೀಯ. ಇಂತಹ ದುಷ್ಕೃತ್ಯ ತಡೆಗೆ ಜಿಲ್ಲಾಡಳಿತ, ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.


ಬೌದ್ಧ ಗುರು ಬೋಧಿದತ್ತ ಬಂತೇಜಿ, ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕ ಡಾ.ಶಿವಕುಮಾರ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಎಸ್.ಉಮೇಶ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಹಿಂದ ಚಿಕ್ಕಜವರಪ್ಪ, ವಕೀಲ ಎಚ್.ಎನ್.ವೆಂಕಟೇಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net