

ಕಲಬುರಗಿ: ಜಾತಿಯತೆ, ಅಷ್ಪೃಷ್ಯತೆ, ಮನುವಾದದ ವಿರುದ್ಧ ದಲಿತರು ಶೂರರಂತೆ ಹೋರಾಡಿ ಗೆಲುವು ಸಾಧಿಸಿದ ಸ್ವಾಭಿಮಾನ ದಿನ ಭೀಮಾ ಕೋರೆಗಾಂವ ವಿಜಯೋತ್ಸವ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಸೋಮಶೇಖರ ಅಪ್ಪಗೆರೆ ಹೇಳಿದರು.
ನಗರದ ಜಗತ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ, ದಲಿತ ವಿದ್ಯಾರ್ಥಿ ಒಕ್ಕೂಟದಿಂದ ಬುಧವಾರ ಹಮ್ಮಿಕೊಂಡ ಭೀಮಾ ಕೋರೆಗಾಂವ ವಿಜಯೋತ್ಸವ, ದಲಿತರ ಸ್ವಾಭಿಮಾನ ಜಾಗೃತಿ ದಿನದ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಪೇಶ್ವೆಗಳ ಜಾತಿಯತೆಯ ಕಾರಣಕ್ಕೆ ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದ ಮಹಾರ ಸೈನಿಕರು ಬ್ರಿಟಿಷರ ಜತೆ ಕೈಜೋಡಿಸಿ, ಯುದ್ಧ ಮಾಡಿ, ಸ್ವಾಭಿಮಾನ ಪ್ರದರ್ಶಿಸಿದ್ದರು ಎಂದರು.
ಇAದಿಗೂ ಸಮಾಜದಲ್ಲಿ ಜಾತಿಯತೆ ಜೀವಂತವಿದ್ದು, ಅದರ ವಿರುದ್ಧ ವೈಚಾರಿಕ, ಅಕ್ಷರದ ಯುದ್ಧ ಸಂವಿಧಾನ ಬದ್ಧ ಹೋರಾಟ ನಿರಂತರವಾಗಿ ಇರಬೇಕು. ೫೦೦ ಮಹಾರ ಯೋಧರು ೨೫ ಸಾವಿರ ಪೇಶ್ವೆ ಯೋಧರ ಪಡೆ ಸೋಲಿಸಲು ಕಾರಣ, ಮಹಾರ ಸೈನಿಕರಲ್ಲಿನ ಒಗ್ಗಟ್ಟು. ಆ ಒಗ್ಗಟ್ಟನ್ನು ಅಂಬೇಡ್ಕರ್ ಬಯಸಿಯೇ, ಶಿಕ್ಷಣ, ಸಂಘಟನೆ ಹೋರಾಟ ಎಂದಿದ್ದರು. ಕೋರೆಗಾಂವದಲ್ಲಿ ಜಾತಿಯತೆ ವಿರುದ್ಧದ ಜ್ಞಾನ ಜಾಗೃತವಾಗಿ, ಸೈನಿಕ ಸಂಘಟನೆ ಆಗಿ, ಹೋರಾಡಿದ್ದರಿಂದ ಗೆಲುವು ದೊರೆಯಿತು. ಆ ಪರಂಪರೆ ಮುಂದುವರಿಯಲಿ ಎಂದರು.
ಭಾರತದ ಚರಿತ್ರೆಯಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನ ಜ.೧ರ ಭೀಮಾ ಕೋರೆಗಾಂವ ವಿಜಯೋತ್ಸವ. ೧೯೨೬ರಲ್ಲಿ ಬ್ರಿಟಿಷರು ದಲಿತ ಮಹಾರ್ ಜನರನ್ನು ಸೈನ್ಯದಲ್ಲಿ ಪ್ರವೇಶ ನಿಷೇಧಿಸಿದ್ದರ ವಿರುದ್ಧ ಅಂಬೇಡ್ಕರ್ ಮತ್ತು ದಾದಾಸಾಹೇಬ್ ಗಾಯಕ್ವಾಡ್ ಕೂಡಿ ಐತಿಹಾಸಿಕ ಭೀಮಾ ಕೋರೆಗಾಂವ ಮೂಲಕ ಹೋರಾಟ ಆರಂಭಿಸಿ, ಸೈನ್ಯದಲ್ಲಿ ಅವಕಾಶ ಕೊಡಿಸಿದ್ದರು. ಪರಂಪರೆ ಮರೆತರೆ ಅಧಿಕಾರ, ಅವಕಾಶ ಕಳೆದುಕೊಳ್ಳಬೇಕಾಗುತ್ತದೆ. ಇತಿಹಾಸ ಅರಿತರೆ ಇತಿಹಾಸ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದರು.
ಕೆಪಿಸಿಸಿ ಸದಸ್ಯ ರಾಜಗೋಪಾಲರೆಡ್ಡಿ ಮಾತನಾಡಿ, ಎಲ್ಲ ಜಾತಿಯ ಹಿಂದುಳಿದ ವರ್ಗಗಳ ಸ್ವಾಭಿಮಾನದ ದಿನ. ಅಸ್ಪÊಷ್ಯತೆ ವಿರೋಧಿಸಿ ಗೆಲುವು ಸಾಧಿಸಿದ ಈ ದಿನದಂದು ನಾವೆಲ್ಲರೂ ಸ್ವಾಭಿಮಾನದಿಂದ ಜೀವನ ಸಾಗಿಸಲು ಪ್ರೇರಣೆ ನೀಡುತ್ತದೆ ಎಂದರು.
ಕಾAಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಮಾತನಾಡಿದರು. ಸುರೇಶ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಡಿಎಸ್‌ಎಸ್ ಬಿ.ಸಿ.ವಾಲಿ, ದಯಾನಂದ ದೊಡ್ಡಮನಿ, ಎಸ್.ಪಿ.ಸುಳ್ಳದ, ಪವನಕುಮಾರ ವಳಕೇರಿ, ಶಂಕರ ಶಾಬಾದಿ, ಸಿದ್ರಾಮ ಪ್ಯಾಟಿ, ರೇವಣಸಿದ್ದಪ್ಪ ಜಾಲಿ ಇತರರಿದ್ದರು.