ಹುಬ್ಬಳ್ಳಿ: ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೆಳಗಾವಿಯ ನಿಪ್ಪಾಣಿಗೆ ಬಂದು ಹೋದ ನೆನಪಿಗಾಗಿ ಶತಮಾನ ಸಂಭ್ರಮ ಆಚರಿಸದಂತೆ ನಕಲಿ ಗಾಂಧಿಗಳು ಷಡ್ಯಂತ್ರ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೂರಿದರು.
ನಗರದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ "ಭೀಮ ಹೆಜ್ಜೆ ಶತಮಾನ ಸಂಭ್ರಮ' ಜಾಗೃತಿ ಕಾರ್ಯಕ್ರಮಕ್ಕೆ ಇಲ್ಲಿಯ ಅಂಬೇಡ್ಕರ್ ಸರ್ಕಲ್ ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರಕ್ಕೆ ಸೂಚಿಸುವ ಮೂಲಕ ಅಂಬೇಡ್ಕರ್ ಗೌರವಾರ್ಥದ ಸಮಾರಂಭವನ್ನು ತಡೆಯಿತು ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಭೀಮ ಹೆಜ್ಜೆ ಶತಮಾನ ಸಂಭ್ರಮ ಆಚರಿಸದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ ಅವರು ದಲಿತ ಸಮುದಾಯದ ಕ್ಷಮೆ ಕೇಳಬೇಕು. ತಮ್ಮ ಪ್ರಮಾದ ಒಪ್ಪಿಕೊಳ್ಳಬೇಕು. ಮುಂದೆ ಯಾವುದೇ ರೀತಿ ಚ್ಯುತಿ ಬರದಂತೆ ಅಂಬೇಡ್ಕರ್ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮಗಳನ್ನು ನಡೆಸುವುದಾಗಿ ಮಾತು ಕೊಡಬೇಕು ಎಂದು ಜೋಶಿ ಆಗ್ರಹಿಸಿದರು.
ಮಾತು ನಡೆಯಲ್ಲ:
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ ಅವರ ಮಾತು ಪಕ್ಷದಲ್ಲಿ ನಡೆಯುತ್ತಿಲ್ಲ ಎಂಬುದು ವಿಷಾದದ ಸಂಗತಿ. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರ ಮಾಡಿದ ದೀಕ್ಷಾ ಭೂಮಿಯನ್ನು ಅಭಿವೃದ್ಧಿಪಡಿಸಿರುವುದು ಎನ್‌ಡಿಎ ಸರ್ಕಾರವೇ ಹೊರತು ನಕಲಿ ಗಾಂಧಿಗಳಿಂದ ಕೂಡಿದ ಕಾಂಗ್ರೆಸ್ ಅಲ್ಲ. ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಇತಿಹಾಸ ಸರಿಯಾಗಿ ಗೊತ್ತಿದ್ದಂತೆ ಕಾಣುತ್ತಿಲ್ಲ ಎಂದು ಜೋಶಿ ಟೀಕಿಸಿದರು.
ರಾಜ್ಯ ಸರ್ಕಾರ ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು ಹೋದ ನೆನಪಿಗೆ ಶತಮಾನ ಸಂಭ್ರಮ ಆಚರಿಸಿತು. ಬೆಳಗಾವಿಗೆ ಮಹಾತ್ಮಗಾಂಧಿ ಅವರು ಬಂದಿದ್ದನ್ನು ಸ್ಮರಿಸಿತು ಎಂಬುದು ಖುಷಿಯ ವಿಚಾರ. ಆದರೆ, ಅದೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಅಂಬೇಡ್ಕರ್ ಬಂದು ಹೋದ ನೂರು ವರ್ಷದ ನೆನಪನ್ನು ನಕಲಿ ಗಾಂಧಿವಾದಿಗಳ ಮಾತು ಕೇಳಿ ಕೈ ಬಿಟ್ಟಿರುವುದು ತೀವ್ರ ನೋವಿನ ಸಂಗತಿ ಎಂದು ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಭೀಮ ಹೆಜ್ಜೆ:
ಬಿಜೆಪಿ ವತಿಯಿಂದ ಹಮ್ಮಿಕೊಂಡ ಭೀಮ ಹೆಜ್ಜೆ ರಥಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಲೋಕಸಭಾ ಮಾಜಿ ಸದಸ್ಯ ಮುನಿಸ್ವಾಮಿ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗಿ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದಶಿರ್ ಮಹೇಂದ್ರ ಕೌತಾಳ, ಲಿಂಗರಾಜ ಪಾಟೀಲ, ಸಾಬು ದೊಡ್ಡಮನಿ, ಶ್ರೀನಿವಾಸ್, ಪ್ರಶಾಂತ್, ದೀಪಕ್ ದೊಡ್ಡಯ್ಯ, ಡಾ. ಕ್ರಾಂತಿಕಿರಣ, ಬಸವರಾಜ ಅಮ್ಮಿನಭಾವಿ, ಲಕ್ಷ್ಮಣ ಬೀಳಗಿ, ಪ್ರಕಾಶ್ ಕ್ಯಾರಕಟ್ಟಿ, ಪರಶುರಾಮ್ ಪೂಜಾರ್, ರಾಜು ಕಾಳೆ, ಮಂಜುನಾಥ್ ಕಾಟ್ಕರ್, ನಾರಾಯಣ ರ್ಜತಾರಘರ್, ರವಿ ನಾಯಕ, ಸಿದ್ದು ಮೊಗಲಿಶೆಟ್ಟರ್, ಅನುಪ ಬಿಜವಾಡ, ಪ್ರಭು ನವಲಗುಂದಮಠ, ರಾಜು ಜರತಾರಘರ್ ಮೊದಲಾದವರು ಉಪಸ್ಥಿತರಿದ್ದರು.