ಚಿಂತಕರು, ಬರಹಗಾರರಿಗೆ ಒತ್ತು ಕೊಡಲಿ: ಭೀಮ್ ಆರ್ಮಿ ಸೌತ್ ಇಂಡಿಯಾ ಕರ್ನಾಟಕದ ಸಂಸ್ಥಾಪಕ ಸಿ.ಅನ್ನದಾನಿ ಒತ್ತಾಯ

Bhim Army South India Organization Press Conference Mandya
Published on

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಗತಿಪರ ಚಿಂತಕರು, ಯುವ ಬರಹಗಾರರು, ದಲಿತ ಬರಹರಾರರಿಗೆ ಹೆಚ್ಚಿನ ಒತ್ತು ನೀಡಲು ಕನ್ನಡ ಸಾಹಿತ್ಯ ಪರಿಷತ್ ಮುಂದಾಗಬೇಕು ಎಂದು ಭೀಮ್ ಆರ್ಮಿ ಸೌತ್ ಇಂಡಿಯಾ ಕರ್ನಾಟಕದ ಸಂಸ್ಥಾಪಕ ಸಿ.ಅನ್ನದಾನಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನವು ಹೆಸರಿಗೆ ಮಾತ್ರ ನಡೆಯದೇ ಜನರ ನೋವು, ದುಃಖ ದುಮ್ಮಾನವನ್ನು ಬಿಂಬಿಸುವ, ರೈತ ನಾಯಕ ಪುಟ್ಟಣ್ಣಯ್ಯ, ದಲಿತ ಕವಿ ಸಿದ್ದಲಿಂಗಯ್ಯರ ಕೊಡುಗೆಗಳು ಪ್ರತಿಧ್ವನಿಸುವಂತಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತರ ನೋವುಗಳು, ವಿಚಾರವಾದಿಗಳಾದ ಗೌರಿ ಲಂಕೇಶ್, ಎಂ.ಎಂ.ಕಲ್ಬುರ್ಗಿ ಹತ್ಯೆ ವಿಷಯ ಸಮ್ಮೇಳನದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿಯಾಗಬೇಕು. ದೇವನೂರು ಮಹಾದೇವು, ದಸಂಸ ಹೋರಾಟಗಾರ ವೆಂಕಟಗಿರಿಯಯ್ಯ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಬೇಕು. ಕೋಮು ಸೌಹಾರ್ದತೆ ನಿವಾರಿಸುವಂತಾಗಬೇಕು, ನಾಡಿನಲ್ಲಿ ಶಾಂತಿ ನೆಲೆಸುವಂತಹ ಕೆಲಸಗಳನ್ನು ವೇದಿಕೆ ಸಾಹಿತ್ಯದ ಮೂಲಕ ಸೃಷ್ಠಿಸುವಂತಹ ನಿರ್ಣಯಗಳಾಗಬೇಕು. ಸಮ್ಮೇಳನಕ್ಕೆ ಸರ್ಕಾರದಿಂದ 25 ಕೋಟಿ ರೂ ಬಿಡುಗಡೆಯಾಗಿರುವುದು ಸ್ವಾಗತಾರ್ಹ. ಸಮ್ಮೇಳನವು ನಾಡಿನ ಹಿರಿಮೆ ಮತ್ತು ಸಕ್ಕರೆನಗರಿಯ ಹೆಮ್ಮೆಯನ್ನು ಹೆಚ್ಚಿಸುವಂತೆ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಸಂಸ್ಥಾಪಕ ಎಸ್.ಪಿ.ಶಿವಕುಮಾರ್, ಸದಸ್ಯ ಶ್ರೀನಿವಾಸ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ನಂಜುಂಡಮೌರ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net