ಅಭಿವೃದ್ಧಿ ಕಾಣದ ಭೇರ್ಯ ಗ್ರಾಮ

ಭೇರ್ಯ ಗ್ರಾಮ ಗಾಂಧಿ ವೃತ ಸರ್ಕಲ್.
ಭೇರ್ಯ ಗ್ರಾಮ ಗಾಂಧಿ ವೃತ ಸರ್ಕಲ್.
Published on

ಸಾಲಿಗ್ರಾಮ: ತಾಲೂಕಿನಲ್ಲಿ ಈ ಹಿಂದಿನಿಂದಲೂ ಅಭಿವೃದ್ಧಿ ಕಾಣದ ಗ್ರಾಮ ಎಂದರೆ ಅದು ಭೇರ್ಯ ಗ್ರಾಮ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರದ ಆಡಳಿತದಲ್ಲೂ ಇಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆ.

ತಾಲೂಕಿನ ಭೇರ್ಯ ಗ್ರಾಮದಲ್ಲಿ 6,664 ಜನಸಂಖ್ಯೆಯಿದ್ದು, 4521 ಮತದಾರರಿದ್ದಾರೆ. ವ್ಯಾಪಾರ-ವಹಿವಾಟಿನಲ್ಲಿ ಮುನ್ನುಗ್ಗುತ್ತಿದ್ದರೂ ಸರ್ಕಾರಿ ಸೌಲಭ್ಯದಿಂದ ಭೇರ್ಯ ಸೇರಿದಂತೆ ಸುತ್ತಮುತ್ತ ಗ್ರಾಮಗಳು ವಂಚಿತವಾಗಿವೆ. ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು ಸೇರಿದಂತೆ ಇತರ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಲು ಮತ್ತು ಅವರ ಪಕ್ಷ ಅಧಿಕಾರ ಬರಲು ಭೇರ್ಯ ಮತ್ತು ಸುತ್ತಮುತ್ತ ಗ್ರಾಮ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಅಭಿವೃದ್ಧಿ ಎಂಬ ವಿಚಾರ ಮುಂದೆ ಬಂದಾಗ ಚುನಾಯಿತ ಪ್ರತಿನಿಧಿಗಳು ಮಾತ್ರ ಯಾರೂ ಮುಂದೆ ಬರುವುದಿಲ್ಲ.

ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳ ಗಡಿ ಭಾಗವಾಗಿರುವ ಈ ಗ್ರಾಮ, ದೊಡ್ಡ ಗ್ರಾಮವೆಂದು ಹೆಸರುವಾಸಿ. ಕೆ.ಆರ್.ಪೇಟೆ, ಹೊಳೆನರಸೀಪುರ, ಕೆ.ಆರ್.ನಗರ, ಅರಕಲಗೂಡು ಸೇರಿದಂತೆ ಇತರ ತಾಲೂಕುಗಳಿಗೆ ಈ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಅಲ್ಲದೆ ಈ ಗ್ರಾಮ ತಾಲೂಕು ಕೇಂದ್ರವಾಗಿ ರೂಪುಗೊಳ್ಳಬೇಕಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಸಾಲಿಗ್ರಾಮ ತಾಲೂಕು ಕೇಂದ್ರವಾಯಿತು. ಗ್ರಾಮದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಇಲ್ಲಿ ವ್ಯಾಪಾರ ಮತ್ತು ಜನಸಂದಣಿ ಹೆಚ್ಚಾಗಿಯೇ ಇದೆ. ದುರದೃಷ್ಟ ಎಂದರೆ ತಾಲೂಕು ಅಥವಾ ಹೋಬಳಿ ಕೇಂದ್ರ ಆಗದಿರುವುದು.

ನೆಮ್ಮದಿ ಕೇಂದ್ರ ಇಲ್ಲ: ಗ್ರಾಮದಲ್ಲಿ ಸೌಲಭ್ಯಗಳಿಲ್ಲದೆ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನರು ಹಾಗೂ ವ್ಯವಹಾರದ ದೃಷ್ಟಿಯಿಂದ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಿ ಇಲ್ಲಿ ನಾಡಕಚೇರಿ ತೆರೆಯಬೇಕು ಎಂಬುದು ಸ್ಥಳೀಯರ ಒತ್ತಾಯ. ನಾಡಕಚೇರಿ ಇಲ್ಲದೆ ಮಿರ್ಲೆ ಗ್ರಾಮಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ. ಇನ್ನು ಬಸ್ ಸೌಲಭ್ಯ ಎಂಬುದು ಮರೀಚಿಕೆ. ಜತೆಗೆ ನೆಮ್ಮದಿ ಕೇಂದ್ರದ ಸೌಲಭ್ಯದಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ.

ರಾಜ್ಯದ ಯಾವುದೇ ಪಟ್ಟಣ ಮತ್ತು ಹೊರ ರಾಜ್ಯಗಳಿಗೆ ಹೋಗಲು 24 ಗಂಟೆಯೂ ಇಲ್ಲಿ ವಾಹನಗಳ ವ್ಯವಸ್ಥೆ ಇದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದು. ಇದರೊಂದಿಗೆ ರೈಲಿನ ವ್ಯವಸ್ಥೆಯೂ ಇದೆ. ಇಂತಹ ಗ್ರಾಮವನ್ನು ಅಭಿವೃದ್ಧಿ ಮಾಡಲು ಸಾಕಷ್ಟು ಅವಕಾಶವಿದ್ದರೂ ಸರ್ಕಾರಗಳು ಸಿದ್ಧವಿಲ್ಲ ಏಕೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಗ್ರಾಮದಲ್ಲಿ ಡಿಗ್ರಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಯಾವುದೇ ಪದವಿ ಕಾಲೇಜು ಇಲ್ಲ, ತರಬೇತಿ ಕಾಲೇಜುಗಳೂ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ದೂರದ ಊರುಗಳಿಗೆ ತೆರಳುವುದು ಅನಿವಾರ್ಯವಾಗಿದೆ.

ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಬೇಕೆಂದರೆ ಭೇರ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಕೃಷಿ, ರೇಷ್ಮೆ, ನಾಡಕಚೇರಿ, ಕೃಷಿ ಮಾರುಕಟ್ಟೆ, ಹೈಟೆಕ್ ಗ್ರಾಮ ಪಂಚಾಯಿತಿ ಕಟ್ಟಡ, ಆಸ್ಪತ್ರೆ ತುರ್ತುಚಿಕಿತ್ಸಾ ವ್ಯವಸ್ಥೆ, 24 ಗಂಟೆ ಆರೋಗ್ಯ ಸೇವೆ, ತಾಲೂಕು ಮಟ್ಟದ ಪ್ರಮುಖ ಉಪ ಸರ್ಕಾರಿ ಕಚೇರಿಗಳು ಇಲ್ಲಿ ಆಗಬೇಕಿದೆ. ಆಗ ಮಾತ್ರ ಗ್ರಾಮ ಅಭಿವೃದ್ಧಿ ಹೊಂದುವುದರೊಂದಿಗೆ ಜನರ ಸಮಸ್ಯೆ ಬಗೆಹರಿಯಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ತಾಲೂಕು ಮಟ್ಟದ ಅಧಿಕಾರಿಗಳು ಹೆಚ್ಚು ಗಮನಹರಿಸಬೇಕಿದೆ. ಕೆ.ಆರ್.ನಗರ ಮತ್ತು ಸಾಲಿಗ್ರಾಮ ಭತ್ತದ ಕಣಜವಾದರೂ ಭೇರ್ಯ ಸುತ್ತಮುತ್ತಲಿನ ನಾಲೆಗಳು ಮುಚ್ಚು ಹೋಗುತ್ತಿವೆ. ಮಳೆ ಬಿದ್ದರೆ ಮಾತ್ರ ರೈತರು ಮತ್ತು ಜನರ ಬದುಕು ಹಸನಾಗುತ್ತದೆ. ಇಲ್ಲದಿದ್ದರೆ ವರ್ಷವಿಡೀ ಕಣ್ಣೀರು ಹಾಕುವ ಪರಿಸ್ಥಿತಿ ಇಲ್ಲಿನವರದ್ದು.

ಭೇರ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಅಭಿವೃದ್ಧಿ ಆಗಬೇಕು. ಹಲವು ವರ್ಷಗಳಿಂದ ಮುಚ್ಚಿ ಹೋಗಿದ್ದ ಕೃಷಿ ಪತ್ತಿನ ಸಹಕಾರ ಸಂಘವನ್ನು ಮತ್ತೆ ತೆರೆಸಲಾಗಿದೆ. ಜತೆಗೆ ಎಂಡಿಸಿಸಿ ಬ್ಯಾಂಕ್ ಶಾಖೆಯನ್ನು ಮಂಜೂರು ಮಾಡಿಸಲಾಗಿದೆ. ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಹಣ ಮಂಜೂರಾಗಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಹೋಬಳಿ ಕೇಂದ್ರವಾವರೆ ಈ ಭಾಗದ ಜನರಿಗೆ ಅನುಕೂಲ.

ಅಮಿತ್ ದೇವರಹಟ್ಟಿ ನಿರ್ದೇಶಕ, ಕೃಷಿ ಪತ್ತಿನ ಸಹಕಾರ ಸಂಘ

ರಾಜ್ಯದ ಯಾವುದೇ ಮೂಲೆಯಿಂದ ಭೇರ್ಯಕ್ಕೆ ಬರಲು-ಹೋಗಲು ಉತ್ತಮ ಸೌಲಭ್ಯವಿರುವುದರಿಂದ ಗ್ರಾಮದಲ್ಲಿ ಪದವಿ ಕಾಲೇಜುಗಳು ಮತ್ತು ರೆಸಿಡೆನ್ಸಿಯಲ್ ಪದವಿ ಶಾಲೆಗಳು ತೆರೆಯಬೇಕು. ಜತೆಗೆ ವೃತ್ತಿಪರ ಕಾಲೇಜುಗಳೂ ಆಗಬೇಕು. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವ ರೆಸಿಡೆನ್ಸಿ ಕಾಲೇಜುಗಳೂ ತೆರೆಯಬೇಕು. ಮುಖ್ಯವಾಗಿ ಮಿನಿ ವಿಶ್ವವಿದ್ಯಾಲಯ ಆಗಬೇಕು. ಈ ಭಾಗದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಇತ್ತ ಗಮನಹರಿಸಬೇಕು.

ಎಂ.ಟಿ.ಕುಮಾರ್ ಜಿಪಂ ಮಾಜಿ ಸದಸ್ಯ

ಭೇರ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಅಭಿವೃದ್ಧಿ ಹೊಂದಬೇಕೆಂಬುದು ಈ ಭಾಗದ ಜನರು ಬಹುದಿನಗಳ ಬೇಡಿಕೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಲಾಗಿದೆ. ಹೆಚ್ಚು ಅನುದಾನ ತಂದು ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ತುರ್ತಾಗಿ ಆಗಬೇಕಾದ ಕೆಲಸಗಳನ್ನು ಮಾಡಿಸುವತ್ತ ಕ್ರಮ ವಹಿಸಲಾಗುವುದು. ಸರ್ಕಾರದಿಂದ ಹೆಚ್ಚು ಅನುದಾನ ತರಲಾಗುವುದು. ಹೋಬಳಿ ಕೇಂದ್ರ ಮತ್ತು ನೆಮ್ಮದಿ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.

ಡಿ.ರವಿಶಂಕರ್ ಶಾಸಕ, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net