ಭೇರ್ಯ-ಮಿರ್ಲೆ ಮುಖ್ಯರಸ್ತೆ ಗುಂಡಿ ಮುಚ್ಚಿದ ಪಿಡಬ್ಲುೃಡಿ

IMG_20240723_121405_6
Published on

ಸಾಲಿಗ್ರಾಮ: ತಾಲೂಕಿನ ಭೇರ್ಯ-ಮಿರ್ಲೆ ಮುಖ್ಯರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿತ್ತು. ಇದರಿಂದ ರಸ್ತೆಗಳಲ್ಲಿ ಗುಂಡಿಗಳಾಗಿ ಕಲ್ಲುಗಳೆದ್ದು, ಸಾರ್ವಜನಿಕರು, ಬೈಕ್ ಸವಾರರು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿನಿತ್ಯ ರಸ್ತೆಯಲ್ಲಿ ಸಾಕಷ್ಟು ಬೈಕ್ ಸವಾರರು ಬಿದ್ದು ಆಸ್ಪತ್ರೆಗೆ ಸೇರಿರುವ ಘಟನೆ ನಡೆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ.


ಈ ಸಂಬಂಧ ಜು.13ರಂದು ‘ಅಭಿವೃದ್ಧಿ ಕಾಣದ ಮಿರ್ಲೆ ಮುಖ್ಯ ರಸ್ತೆ’ ಎಂಬ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಗೆ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.


ಈ ಬಗ್ಗೆ ಮಿರ್ಲೆ ಗ್ರಾಮದ ಕಾಂಗ್ರೆಸ್ ಮುಖಂಡ ನಂದೀಶ್ ವಿಜಯವಾಣಿ ಪತ್ರಿಕೆ ವರದಿಗೆ ಧ್ವನಿಗೂಡಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲೂ ಶಾಸಕ ಡಿ.ರವಿಶಂಕರ್ ವಿಜಯವಾಣಿ ವರದಿ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಕೂಡಲೇ ಮಿರ್ಲೆ-ಭೇರ್ಯ ಮುಖ್ಯ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳುವಂತೆ ಸೂಚಿಸಿದ್ದರು. ಕಾಮಗಾರಿ ಶುರುವಾಗುವ ತನಕ ತಡ ಮಾಡಬೇಡಿ, ಅಲ್ಲಿಯವರೆಗೆ ತಾತ್ಕಾಲಿಕವಾಗಿ ಇರುವ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ತಾಕೀತು ಮಾಡಿದ್ದರು.

ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ. ವಿಜಯವಾಣಿ ಪತ್ರಿಕೆಯ ಈ ಶ್ಲಾಘನೀಯ ಕಾರ್ಯಕ್ಕೆ ಸಾರ್ವಜನಿಕರು ಧನ್ಯವಾದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net