

ಶಶಿಕಾಂತ ಮೆಂಡೆಗಾರ, ವಿಜಯಪುರ
‘‘ಆ ದೇವರು ನಮ್ಮ ದೃಷ್ಟಿ ಕಿತ್ತುಕೊಂಡಿದ್ದರೂ ಸಹ ಸಂಗೀತ ಜ್ಞಾನ ಕೊಟ್ಟು ಬದುಕು ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿದ್ದ. ಆದರೆ ಈ ಹಾಳಾದ ಕರೊನಾ ಬಂದು ನಮ್ಮ ಬಾಳಿಗೇ ಕೊಳ್ಳಿ ಇಟ್ಟಿದೆ. ನಾವು ಬಹಳ ತೊಂದರೆಯಲ್ಲಿದ್ದೇವೆ. ನಮಗೆ ಅನುಕಂಪ ಬೇಡ. ದಯವಿಟ್ಟು ಎಲ್ಲಾದರೂ ಹಾಡಲು ಅವಕಾಶ ಮಾಡಿಕೊಡಿ...’
ಇದು ವಿಜಯಪುರದ ಶ್ರೀ ಭವಾನಿ ಬ್ಲೈಂಡ್ ಫೌಂಡೇಷನ್ ಆಶ್ರಯದಲ್ಲಿ ಬದುಕುತ್ತಿರುವ ಅಂಧ ‘ಗಂಧರ್ವ’ರ ಮನದಾಳದ ನೋವಿನ ನುಡಿಗಳು. ಅವರ ಪರಿಸ್ಥಿತಿ ಅವಲೋಕಿಸಿದರೆ ಎಂಥ ಕಟುಕರ ಕಣ್ಣಾವೆಗಳೂ ತುಂಬಿಕೊಳ್ಳುವುದು ಖಚಿತ.
ವಿಜಯಪುರದ ರಾಮನಗರದಲ್ಲಿರುವ ಸೃಷ್ಟಿ ಕಾಲನಿಯಲ್ಲಿ ಬಾಳು ಸಾಗಿಸುತ್ತಿರುವ ಸುಮಾರು 23 ಸ್ತ್ರೀ, ಪುರುಷ ಅಂಧರಲ್ಲಿ ಕೆಲವರು ಹುಟ್ಟಿನಿಂದ ಕುರುಡರಾದರೆ ಕೆಲವರು ಹಲವು ಕಾರಣಗಳಿಂದ ದೃಷ್ಟಿ ಕಳೆದುಕೊಂಡು ಕತ್ತಲ ಜೀವನದಲ್ಲೇ ಬೆಳಕು ಕಾಣುವ ಪ್ರಯತ್ನದಲ್ಲಿದ್ದಾರೆ.
ಇವರೆಲ್ಲ ಒಂದೆಡೆ ಸೇರಿ ತಾವು ಕಲಿತ ಸಂಗೀತದಿಂದಲೇ ರಾಜ್ಯಾದ್ಯಂತ ಸಂಗೀತ, ರಸಮಂಜರಿ ಕಾರ್ಯಕ್ರಮ ನೀಡುತ್ತಾ ಅದರಿಂದ ಬಂದ ಹಣದಿಂದ ‘ಸ್ವಾಭಿಮಾನ’ದ ಬದುಕು ಸಾಗಿಸುತ್ತಿದ್ದರು. ಆದರೆ ಕರೊನಾ ಮಹಾಮಾರಿ ವಕ್ಕರಿಸಿದ್ದೇ ತಡ ಸಂಗೀತ ಕಾರ್ಯಕ್ರಮಗಳೇ ಇಲ್ಲದೇ ಆದಾಯವೂ ಕಡಿತಗೊಂಡು ಇವರ ತುತ್ತು ಅನ್ನಕ್ಕೂ ಕುತ್ತು ಬಂದಿದೆ. ಇದರ ಪರಿಣಾಮ ಆರೇಳು ತಿಂಗಳಿನಿಂದ ಇವರ ಪಾಡು ದೇವರಿಗೇ ಪ್ರೀತಿ ಎಂಬಂತಾಗಿದೆ.
ಹುಟ್ಟು ಅಂಧರಾಗಿರುವ ಸಂದೀಪ ಚವ್ಹಾಣ ಎಂಬುವವರು ಬೆಂಗಳೂರಿನಲ್ಲಿ ವಿವಿಧ ಕಡೆ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದವರು, ತಾವೂ ತಮ್ಮಂತೆಯೇ ಇರುವ ಅಂಧರಿಗೆ ಅದರಲ್ಲೂ ಅನಾಥರಾದ ಅಂಧರಿಗೆ ಏನಾದರೂ ಮಾಡಬೇಕು ಎಂಬ ಛಲದಿಂದ ಸ್ನೇಹಿತ ಮುತ್ತಣ್ಣ ಮುನವಳ್ಳಿ ಅವರೊಂದಿಗೆ ಸೇರಿ ವಿಜಯಪುರದಲ್ಲಿ ಬ್ಲೈಂಡ್ ಫೌಂಡೇಷನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಇದರಲ್ಲಿ 23 ಜನ ಅಂಧರಿಗೆ ಆಶ್ರಯ ನೀಡಿದರು. ಅದಕ್ಕಾಗಿಯೇ ಒಂದು ಕಟ್ಟಡವನ್ನು ಬಾಡಿಗೆಗೆ ಹಿಡಿದಿದ್ದು ತಿಂಗಳಿಗೆ 25 ಸಾವಿರ ರೂ. ಬಾಡಿಗೆ ಕೊಡುತ್ತಿದ್ದರು. ಆದಾಯವಾಗಿ ರಾಜ್ಯಾದ್ಯಂತ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.
ಆದರೆ ಕರೊನಾ ಹೊಡೆತದಿಂದ ಸಂಗೀತ ಕಾರ್ಯಕ್ರಮಗಳೆಲ್ಲವೂ ಸ್ಥಗಿತಗೊಂಡಿದ್ದರಿಂದ ಆದಾಯದ ಮೂಲಕ್ಕೆ ಕೊಳ್ಳಿ ಬಿದ್ದಿದೆ. ಹೀಗಾಗಿ ಕಳೆದ ಐದು ತಿಂಗಳಿನಿಂದ ಊಟಕ್ಕೂ ಪರದಾಡುವಂತಾಗಿದೆ. ಇರುವ ಕಟ್ಟಡಕ್ಕೂ ಬಾಡಿಗೆ ಕಟ್ಟಿ ನಾಲ್ಕು ತಿಂಗಳಾಗಿದ್ದು, ಮಾಲೀಕರು ಇನ್ನೆಷ್ಟು ದಿನ ಹೀಗೆ ಕೊಡಲು ಸಾಧ್ಯ? ಮುಂದಿನ ನಮ್ಮ ಬದುಕು ಹೇಗೆ ಎಂಬ ಆತಂಕ ಅವರನ್ನು ಕಾಡುತ್ತಿದೆ.
ಇಲ್ಲಿರುವ ಅಂಧರಲ್ಲಿ ಮೂರ್ನಾಲ್ಕು ಜನರು ಸುಮಧುರ ಶಾರೀರವನ್ನು ಹೊಂದಿದ್ದಾರೆ. ಜೊತೆಗೆ ಕೀಬೋರ್ಡ್, ತಬಲಾ, ಹಾರ್ಮೋನಿಯಂ ಮುಂತಾದ ವಾದ್ಯಗಳನ್ನು ನುಡಿಸುವುದರಲ್ಲೂ ಪ್ರಾವಿಣ್ಯ ಪಡೆದಿದ್ದಾರೆ. ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ, ಚಲನ ಚಿತ್ರ ಗೀತೆಗಳನ್ನು ಹಾಡುವಲ್ಲಿಯೂ ನಿಸ್ಸೀಮರಿದ್ದಾರೆ. ಜೊತೆಗೆ ಒಬ್ಬಿಬ್ಬರು ಮಿಮಿಕ್ರಿಯನ್ನೂ ಮಾಡುತ್ತಾರೆ. ಇದುವರೆಗೆ ಸುಮಾರು 30-40 ವೇದಿಕೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರೇ, ಜನ ದಟ್ಟಣೆ ವೃತ್ತಗಳಲ್ಲಿ, ಬೀದಿ ಬದಿಯಲ್ಲಿಯೂ 200ಕ್ಕೂ ಅಧಿಕ ಸಂಗೀತ ಕಾರ್ಯಕ್ರಮ ನೀಡಿ ಅದರಿಂದ ಬರುವ ಆದಾಯದಿಂದ ಎಲ್ಲರೂ ಒಗ್ಗಟ್ಟಿನಿಂದ ಜೀವನ ಸಾಗಿಸುತ್ತಿದ್ದಾರೆ.
ಶಾಲಾ ಕಾರ್ಯಕ್ರಮಗಳು, ಮದುವೆ, ಎಂಗೇಜ್‌ಮೆಂಟ್, ಜಾತ್ರೆ ಸೇರಿದಂತೆ ಇತರೆ ಕಾರ್ಯಕ್ರಮಗಳು ಇದ್ದ ವೇಳೆ ಇವರಿಗೊಂದು ಅವಕಾಶ ಕೊಟ್ಟರೇ ಅಂಧರ ಬಾಳಿಗೆ ಬೆಳಕಾಗುವ ಕೆಲಸವನ್ನು ಎಲ್ಲರೂ ಮಾಡಿದಂತಾಗುತ್ತದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಸೇರಿದಂತೆ ಕರುನಾಡಿನ ಸಹೃದಯಗಳು ಇವರಿಗೆ ಆರ್ಥಿಕ ಸಹಾಯ ಮಾಡಬೇಕಿದೆ. ಇವರ ವಿಳಾಸ : ಶ್ರೀ ಭವಾನಿ ಬ್ಲೈಂಡ್ ಫೌಂಡೇಷನ್, ಸೃಷ್ಟಿ ಕಾಲೋನಿ, ರಾಮನಗರ ರಸ್ತೆ, ವಿಜಯಪುರ-586109 ಮೊಬೈಲ್ ಸಂಪರ್ಕ ಸಂಖ್ಯೆಗಳು. 9663351206, 7760916667, 9606521838. ಧನ ಸಹಾಯ ಮಾಡುವವರು ಖಾತೆ ಸಂಖ್ಯೆ : 39526026149, ಐಎಫ್‌ಎಸ್‌ಸಿ ಕೋಡ್ : ಎಸ್‌ಬಿಐಎನ್ 0015320, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಜಯಪುರ.
ಬರುತ್ತಲೇ ಕತ್ತಲೆಯನ್ನೇ ಹೊತ್ತು ತಂದವರು ನಾವು. ಆದರೂ ಧೃತಿಗೆಡದೆ ಭವಾನಿ ಬ್ಲೈಂಡ್ ಫೌಂಡೇಷನ್ ಹುಟ್ಟು ಹಾಕಿ ಬದುಕು ಕಟ್ಟಿಕೊಂಡಿದ್ದೆವು. ಮುತ್ತಣ್ಣ ಮುನವಳ್ಳಿ, ಸಂತೋಷ ತಳವಿ, ನಟರಾಜ ಪಾಟೀಲ್, ಸನ್ನಿಧಿ ಪಾಟೀಲ್, ಗಾಯತ್ರಿ, ನೇತ್ರಾ ಹೆಚ್, ಮಾಲಾ ಸಿ, ಮಾಯಮ್ಮ ಚವ್ಹಾಣ ಸೇರಿದಂತೆ ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕಲಬುರಗಿ, ಗದಗ, ಶಿವಮೊಗ್ಗ ಜಿಲ್ಲೆಗಳಿಂದ ಬಂದಿರುವ 23ಕ್ಕೂ ಅಧಿಕ ಜನರಿದ್ದು, ಎಲ್ಲರೂ ಸಂಗೀತದಿಂದ ಬಂದ ಹಣದಿಂದ ಹೇಗೋ ಬದುಕು ಸಾಗಿಸುತ್ತಿದ್ದೆವು. ಆದರೆ ನಮಗೆ ಕರೊನಾ ‘ಯಮ’ನಂತೆ ಎರಗಿದ್ದು, ಬದುಕೇ ಬರಡಾಗುತ್ತಿದೆ. ಸಂಕಷ್ಟದ ಸಮಯದಲ್ಲಿ ಸಮಾಜ ಕೈಹಿಡಿಯಬೇಕಿದೆ. ಜೊತೆಗೆ ದಾನಿಗಳು, ಸರ್ಕಾರದವರು ಸಹಾಯ ಮಾಡಿದರೆ ಅನುಕೂಲವಾಗುತ್ತದೆ.ಸಂದೀಪ ಚವ್ಹಾಣ, ಅಧ್ಯಕ್ಷ, ಭವಾನಿ ಬ್ಲೈಂಡ್ ಫೌಂಡೇಷನ್ನಮಗ್ಯಾರೂ ಅನುಕಂಪ ತೋರಿಸಬೇಡಿ. ಅದರ ಬದಲಾಗಿ ಕಾರ್ಯಕ್ರಮಗಳಿಗೆ ಆಹ್ವಾನಿಸಿ. ನಮ್ಮಿಂದ ಸಂಗೀತ ಆಸ್ವಾದಿಸುವ ಮೂಲಕ ನಮಗೊಂದು ಅವಕಾಶ ಕೊಡಿ.ನಟರಾಜ ಪಾಟೀಲ್, ಅಂಧ ಗಾಯಕ, ತಬಲಾ ವಾದಕ