

ವಿಜಯಪುರ: ದೇವನಹಳ್ಳಿ ತಾಲೂಕು ವಿಜಯಪುರ ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಭವ್ಯಮಧು, ಉಪಾಧ್ಯಕ್ಷರಾಗಿ ಜೆಡಿಎಸ್ ತಾಜುನ್ನೀಸಾ ಮೆಹಬೂಬ್ ಪಾಷಾ ಸೋಮವಾರ ಆಯ್ಕೆಯಾದರು.
23 ಸದಸ್ಯ ಬಲದ ವಿಜಯಪುರ ಪುರಸಭೆಯಲ್ಲಿ ಜೆಡಿಎಸ್ 13 ಮಂದಿ ಸದಸ್ಯರು, ಕಾಂಗ್ರೆಸ್ ಏಳು ಮಂದಿ, ಬಿಜೆಪಿಯ ಒಬ್ಬರು, ಪಕ್ಷೇತರರಾಗಿ ಇಬ್ಬರು ಸದಸ್ಯರು ಆಯ್ಕೆಯಾಗಿದ್ದರು.ಭವ್ಯಾ ಮಧು 17 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಪ್ರತಿಸ್ಪರ್ಧಿ ಜೆಡಿಎಸ್‌ನ ವಿಮಲಾ ಬಸವರಾಜು 6 ಮತ ಪಡೆದು ಪರಾಭವಗೊಂಡರು.
ತಾಜುನ್ನೀಸಾನ್ನಿಸ್ಸಾ ಮಹಬೂಬ್ ಪಾಷಾ 19 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಸಲ್ಮಾ ಖಾನಂ ಮುಬಾರಕ್
ನಾಲ್ಕು ಮತದೊಂದಿಗೆ ಸೋಲು ಅನುಭವಿಸಿದರು.
ಕಾಂಗ್ರೆಸ್‌ನ ಸತೀಶ್ ಕುಮಾರ್ ಬಣ ಮತ್ತು ಜೆಡಿಎಸ್ ಭಾಸ್ಕರ್ ಬಣ ಬಿಜೆಪಿ ಅಭ್ಯರ್ಥಿಯನ್ನು ತಮ್ಮತ್ತ ಸೆಳೆದುಕೊಂಡು ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ತೆಕ್ಕೆಗೆದುಕೊಂಡವು.
ನೂತನ ಅಧ್ಯಕ್ಷೆ ಭವ್ಯಾಮಧು ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲ ಪಕ್ಷಗಳ 23 ಮಂದಿ ಸದಸ್ಯರ ಸಹಕಾರ ಪಡೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಶಾಂತಿಯುತ ಮತದಾನ: ಚುನಾವಣಾ ಅಧಿಕಾರಿಯಾಗಿ ತಹಸೀಲ್ದಾರ್ ಬಾಲಕೃಷ್ಣ , ಸಹಾಯಕರಾಗಿ ಪುರಸಭಾ ಮುಖ್ಯ ಅಧಿಕಾರಿ ಸಂತೋಷ್ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸಿದರು. ಡಿವೈಎಸ್‌ಪಿ ವೃತ್ತ ನಿರೀಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ವಿಶೇಷ ಬಂದೋಬಸ್ತ್ ಒದಗಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯನಿರ್ವಹಿಸಿದರು.
1983ರಲ್ಲಿ ಅಬ್ದುಲ್ ಖಾಲಕ್ ಅವರು ಕಾಂಗ್ರೆಸ್‌ನಿಂದ ಅಧ್ಯಕ್ಷರಾಗಿ ಆಯ್ಕೆಯಾದದ್ದನ್ನು ಹೊರತುಪಡಿಸಿದರೆ ಇದುವರೆಗೂ ಯಾವುದೇ ಅಲ್ಪಸಂಖ್ಯಾತರಿಗೆ ಅಧ್ಯಕ್ಷ ಸ್ಥಾನದ ಪ್ರಾತಿನಿಧ್ಯ ದೊರೆತಿಲ್ಲದಿರುವುದು ಶೋಚನೀಯ.ಪಕ್ಷದಲ್ಲಿ ಯಾರು ಪ್ರಾಮಾಣಿಕರಾಗಿ ಇರುತ್ತಾರೋ, ಅವರಷ್ಟು ಮುಟ್ಟಾಳರು ಮತ್ತ್ಯಾರೂ ಇಲ್ಲ. -ಸಲ್ಮಾ ಖಾನಂ ಮುಬಾರಕ್, ಉಪಾಧ್ಯಕ್ಷ ಸ್ಥಾನದ ಪರಾಜಿತಅಭ್ಯರ್ಥಿ