

ಮೇಲುಕೋಟೆ: ಮೇಲುಕೋಟೆ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಭವಾನಿ ಹರಿಧರ್ ಅವಿರೋಧವಾಗಿ ಆಯ್ಕೆಯಾದರು.
ಅಧಿಕಾರ ಒಡಂಬಡಿಕೆಯಂತೆ ಅಧ್ಯಕ್ಷೆ ಮಣಿಮುರುಗನ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. 9 ಸದಸ್ಯಬಲದ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಭವಾನಿಹರಿಧರ್ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ನೂತನ ಅಧ್ಯಕ್ಷೆಯನ್ನಾಗಿ ಭವಾನಿ ಅವಿರೋಧವಾಗಿ ಆಯ್ಕೆಯಾದರು.
ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರ ಮಾರ್ಗದರ್ಶನದಂತೆ ನಡೆದುಕೊಂಡ ಜೆಡಿಎಸ್ ಬಿಜೆಪಿ ಬೆಂಬಲಿತ ಆಡಳಿತವಿರುವ ಪಂಚಾಯಿತಿಯಲ್ಲಿ ಗ್ರಾ.ಪಂ. ಅಧ್ಯಕ್ಷರ ಆಯ್ಕೆಯ ಸಂಬಂಧ ಈ ಹಿಂದೆಯೆ ಒಡಂಬಡಿಕೆ ಮಾಡಿಕೊಂಡಂತೆ ಅಧ್ಯಕ್ಷ ಸ್ಥಾನಕ್ಕೆ ಮಣಿಮುರುಗನ್ ರಾಜೀನಾಮೆ ಸಲ್ಲಿಸಿದ್ದರು. ಈ ಕಾರಣ ಉಪಾಧ್ಯಕ್ಷ ಜಿ.ಕೆ. ಕುಮಾರ್ ಪ್ರಭಾರ ಅಧ್ಯಕ್ಷರಾಗಿದ್ದರು. ಉಪವಿಭಾಗಾಧಿಕಾರಿಗಳ ಆದೇಶದಂತೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಭವಾನಿ ಹರಿಧರ ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದರೂ ಸಹ ಪ್ರಥಮ ಅವಧಿಯಲ್ಲಿ ಪರಿಶಿಷ್ಠ ಜಾತಿಯ ಮಹಿಳೆಗೆ ಎರಡನೇ ಅವಧಿಗೆ ಹಿಂದುಳಿದ ವರ್ಗದ ಮಹಿಳೆಯನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ ಮಾಜಿ ಸಚಿವ ಸಿಎಸ್.ಪುಟ್ಟರಾಜು ಅವರ ಬಗ್ಗೆ ಮೇಲುಕೋಟೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದರು. ಚುನಾವಣಾಧಿಕಾರಿಯಾಗಿ ನರೇಗ ಸಹಾಯಕ ನಿರ್ದೇಶಕ ರಮೇಶ್ ಕರ್ತವ್ಯ ನಿರ್ವಹಿಸಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಭವಾನಿಹರಿಧರ್ ಅವರನ್ನು ಪಿಡಿಒ ರಾಜೇಶ್ವರ್, ಉಪಾಧ್ಯಕ್ಷ ಜಿ.ಕೆ.ಕುಮಾರ್ ಸದಸ್ಯರಾದ ವಾದ್ಯಾರ್ ಎನ್. ತಿರುಮಲೈ, ಜಯರಾಮೇಗೌಡ, ಲಕ್ಷ್ಮಮ್ಮ, ಮಣಿಮುರುಗನ್ ಅಭಿನಂದಿಸಿದರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ
ರಾಮಾನುಜರ ಕರ್ಮಭೂಮಿ ಮೇಲುಕೋಟೆ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣವಾಗಿದ್ದು, ಕ್ಷೇತ್ರದ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಗ್ರಾಮ ಪಂಚಾಯಿತಿ ಆಡಳಿತ ನಿಗಾವಹಿಸಬೇಕು ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದರು.
ಮೇಲುಕೋಟೆಯಲ್ಲಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಭವಾನಿ ಅವರನ್ನು ಅಭಿನಂದಿಸಿ ಮಾತನಾಡಿದರು.
ಜೆಡಿಎಸ್ ಬೆಂಬಲಿತ ಎಲ್ಲ ಸದಸ್ಯರೂ ಒಗ್ಗಟ್ಟಾಗಿದ್ದು ನಾಗರಿಕರ ಸಮಸ್ಯೆ ಬಗೆಹರಿಸಬೇಕು. ಮೇಲುಕೋಟೆಗೆ ಸೌಲಭ್ಯಗಳು ಕಲ್ಪಿಸುವ ಕೆಲಸಮಾಡಬೇಕು. ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ನಾಗರಿಕರೂ ಮೂಲ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮೇಲುಕೋಟೆ ಅಭಿವೃದ್ಧಿಯ ವಿಚಾರಬಂದಾಗ ಪಕ್ಷಬೇಧ ಮರೆತು ಶ್ರಮಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಿ ಎಂದು ಸಲಹೆ ನೀಡಿದರು.
ಜೆಡಿಎಸ್ ಮುಖಂಡರಾದ ಶಂಬೂನಹಳ್ಳಿ ಆನಂದ ಮೇಲುಕೋಟೆ ಮುಖಂಡರಾದ ಈಶಮುರುಳಿ, ಜಯಲಕ್ಷ್ಮಿಪುಟ್ಟರಾಜು, ರವಿಪುಳಿಯೋಗರೆ, ಪಾರ್ಥ, ವಿಎಸ್.ಎಸ್.ಎನ್ ನಿರ್ದೇಶಕ ಮಹೇಶ್, ಡೈರಿ ಸದಸ್ಯ ನಂದಕುಮಾರ್, ನಿಂಗೇಗೌಡ, ಸುಬ್ಬಣ್ಣ ಮೆಸ್ ಶಂಕರ್, ವಿದ್ವಾನ್ ಎಂ.ಎನ್.ಪಿ. ರತ್ನಂ ಇತರರು ಭಾಗವಹಿಸಿದ್ದರು.