

ಹುಬ್ಬಳ್ಳಿ: ಶಿರಹಟ್ಟಿಯ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಅವರ ಅಮೃತ ಮಹೋತ್ಸವ ಅಂಗವಾಗಿ ರಾಜ್ಯದಲ್ಲಿ ಸಾಮರಸ್ಯ ಸಾರುವ ದಿಸೆಯಲ್ಲಿ ಹಮ್ಮಿಕೊಳ್ಳಲಾಗಿರುವ ಭಾವೈಕ್ಯ ರಥಯಾತ್ರೆಗೆ ಗುರುವಾರ ಇಲ್ಲಿಯ ವೀರಾಪುರ ಓಣಿಯಲ್ಲಿ ಭವ್ಯ ಸ್ವಾಗತ ನಿಡಲಾಯಿತು.
ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ 20 ದಿನಗಳವರೆಗೆ ಸಂಚರಿಸಲಿರುವ ರಥಯಾತ್ರೆಯು ಎರಡನೇ ದಿನ ನಗರದ ಎರಡೆತ್ತಿನಮಠ ಬಳಿಯ ಮಹಾಬಳೇಶ್ವರ ದೇವಸ್ಥಾನದಿಂದ ಆರಂಭವಾಯಿತು.
ಅಲಂಕೃತ ಆಸನದಲ್ಲಿ ಆಸೀನರಾದ ಉಭಯ ಶ್ರೀಗಳನ್ನು ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ಪುಷ್ಪವೃಷ್ಟಿ ಮಾಡಿದ ಭಕ್ತರು ಭಕ್ತಿ ಸರ್ಮಪಿಸಿದರು. ರ್ಪೂಣಕುಂಭ ಮೇಳ, ಭಜನಾ ಮೇಳ, ಹೆಜ್ಜೆಮೇಳಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.
ಮೆರವಣಿಗೆಯುದ್ದಕ್ಕೂ ಭಕ್ತರ ಜಯಘೋಷಗಳು ಮೊಳಗಿದವು. ಶಿರಹಟ್ಟಿ ಫಕೀರೇಶ್ವರ ಮಹಾರಾಜ್ ಕೀ ಜೈ…, ಹಿಂದು ಮುಸ್ಲಿಂ ಭಾವ್ಯಕ್ಯ ಸಾರುತ್ತಿರುವ ಶ್ರೀಗಳಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.
ರಥಯಾತ್ರೆಯ ಮಾರ್ಗದಲ್ಲಿ ಮಹಿಳೆಯರು, ಯುವತಿಯರು ಬಣ್ಣದ ರಂಗೋಲಿ ಬಿಡಿಸಿ, ಹೂಗಳನ್ನು ಹಾಕಿ ಭಕ್ತಿಯಿಂದ ಬರಮಾಡಿಕೊಂಡರು. ರಥ ಮನೆ ಬಾಗಿಲಿಗೆ ಬರುತ್ತಿದ್ದಂತೆ ಎಲ್ಲ ಸದಸ್ಯರು ಶ್ರೀಗಳ ದರ್ಶನ ಪಡೆದರು.
ನಂತರ ನಡೆದ ಧರ್ಮಜಾಗೃತಿ ಸಭೆಯಲ್ಲಿ ಶಿರಹಟ್ಟಿ ಸಂಸ್ಥಾನಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀಫಕೀರ ಸಿದ್ಧರಾಮ ಸ್ವಾಮೀಜಿ ಜನನ ಹಾಗೂ ಅವರ ಪವಾಡಗಳ ಕುರಿತು ವಿವರಿಸಿದರು. ಶಿರಹಟ್ಟಿ ಸಂಸ್ಥಾನಮಠದ ಇತಿಹಾಸ ತಿಳಿಸಿದರು.
ಶ್ರೀ ಚನ್ನಮಲ್ಲ ಸ್ವಾಮೀಜಿ, ಮಲ್ಲಿಕಾರ್ಜುನ ಸಾವುಕಾರ, ಮಹಾಂತೇಶ ಗಿರಿಮಠ, ಚಂದ್ರಶೇಖರ ಗೋಕಾಕ, ಮಲ್ಲಿಕಾರ್ಜುನ ಶಿರಗುಪ್ಪಿ, ಪ್ರಕಾಶ ಬೆಂಡಿಗೇರಿ, ಹನಮಂತಪ್ಪ ದೊಡ್ಡಮನಿ, ವೀರಾಪುರ ಓಣಿಯ ಹಿರಿಯರು ಯಾತ್ರೆಯಲ್ಲಿ ಪಾಲ್ಗೊಂಡರು.