

ಮೂಡುಬಿದಿರೆ: ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ನಾಲ್ಕು ದಿನ ಉತ್ತರ ಭಾರತಕ್ಕೆ ಧಾರ್ಮಿಕ ಪ್ರವಾಸ ಕೈಗೊಂಡಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಮಧ್ಯ ಪ್ರದೇಶ, ರಾಜಸ್ಥಾನ್, ಗುಜರಾತ್ ರಾಜ್ಯಗಳ ವಿವಿಧ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸಿದರು. ಗುಜರಾತ್ನಲ್ಲಿ ಅರಹಂತ ಕೀರ್ತಿ ನೂತನ ಭಟ್ಟಾರಕ ಸ್ವಾಮೀಜಿ ಪೀಠಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ಸಂದರ್ಭ ಧರ್ಮಸಂದೇಶ ನೀಡಿ, ಗುಜರಾತ್ ಗಿರಿನಾರ ಸಿದ್ಧಕ್ಷೇತ್ರದಲ್ಲಿ ಲಿಪಿಬದ್ಧಗೊಂಡ ಏಕೈಕ ಜೈನ ಆಗಮ ಷಟ್ಖಂಡ ಆಗಮ ಜೈನಕಾಶಿ ಮೂಡುಬಿದಿರೆಯಲ್ಲಿ ಸುರಕ್ಷಿತವಾಗಿದ್ದು, ಸುಮಾರು ಎರಡು ಸಾವಿರ ವರ್ಷಗಳಿಂದ ಕ್ಷೇತ್ರದ ಸಂಬಂಧ ಇದೆ. ಭಟ್ಟಾರಕ ಪೀಠಗಳು ಧರ್ಮ ಜಾಗೃತಿ, ಪ್ರಾಚೀನ ಕ್ಷೇತ್ರಗಳ ಜೀರ್ಣೋದ್ದಾರ, ಧರ್ಮ ಸಾಮರಸ್ಯ, ಶಾಂತಿ ಸೌಹಾರ್ದ ಕಾಪಾಡುವ ಕೆಲಸ ಮುಂದುವರಿಸಲಿ ಎಂದರು.