

ಕಾರವಾರ: ಒಂದೇ ದಿನ 12 ಕರೊನಾ ಪ್ರಕರಣಗಳು ಖಚಿತವಾಗಿದ್ದರಿಂದ ಭಟ್ಕಳ ತಲ್ಲಣಗೊಂಡಿದೆ. ಸೋಂಕಿತ ಯುವತಿಯ ಸಂಪರ್ಕಕ್ಕೆ ಬಂದ ಆಕೆಯ ಮನೆಯ 10 ಜನರಲ್ಲಿಯೂ ಕರೊನಾ ಸೋಂಕು ಇರುವುದು ಖಚಿತವಾಗಿದೆ. ಅದಲ್ಲದೆ ಪಕ್ಕದ ಮನೆಯ ಒಬ್ಬ ವ್ಯಕ್ತಿ ಹಾಗೂ ಆಕೆಯ ಆಪ್ತ ಸ್ನೇಹಿತೆಗೂ ಕರೊನಾ ಹಬ್ಬಿದೆ.
ಐದು ತಿಂಗಳ ಮಗು ಸೇರಿ ಮೂವರು ಮಕ್ಕಳು, ಮೂವರು ವೃದ್ಧರು ಹಾಗೂ ಮಹಿಳೆಯರು ಈ 12 ಸೋಂಕಿತರ ಪಟ್ಟಿಯಲ್ಲಿದ್ದಾರೆ. ಎಲ್ಲರಿಗೂ ಕಾರವಾರ ಕ್ರಿಮ್ಸ್ ಆಸ್ಪತ್ರೆಯ ಕರೊನಾ ವಾರ್ಡ್‌ಗೆ ದಾಖಲು ಮಾಡಲಾಗಿದೆ. ಈ 12 ಜನರ ಸಂಪರ್ಕಕ್ಕೆ ಬಂದ 52 ಜನರ ಗಂಟಲ ದ್ರವದ ಮಾದರಿ ಸಂಗ್ರಹಿಸಿ, ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಒಂದೆರಡು ದಿನದಲ್ಲಿ ವರದಿ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.
ಮೇ 5ರಂದು ಕರೊನಾ ಸೋಂಕು ಖಚಿತವಾದ ಯುವತಿಯ ಅಕ್ಕ ಹಾಗೂ ಭಾವ ಅವರ 5 ತಿಂಗಳ ಮಗುವಿನೊಂದಿಗೆ ಅಪಸ್ಮಾರ ಚಿಕಿತ್ಸೆಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿಂದ ಸೋಂಕು ಹಬ್ಬಿದ್ದು, ಅವರಲ್ಲಿ ರೋಗ ಲಕ್ಷಣ ಕಾಣಿಸಿರಲಿಲ್ಲ. ಅವರ ಸಂಪರ್ಕಕ್ಕೆ ಬಂದ ಯುವತಿಯಲ್ಲಿ ಮೊದಲು ರೋಗ ಲಕ್ಷಣ ಕಾಣಿಸಿದ್ದರಿಂದ ಅವರನ್ನು ಪರೀಕ್ಷೆ ಮಾಡಿಸಲಾಯಿತು. ಇದೇ ಅವಧಿಯಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇನ್ನೆರಡು ಕುಟುಂಬಗಳು ಭಟ್ಕಳದಲ್ಲಿದ್ದು, ಅವರ ಗಂಟಲ ದ್ರವವನ್ನೂ ತೆಗೆದು ಪರೀಕ್ಷೆಗೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಭಟ್ಕಳವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗುತ್ತಿದೆ. ಪೊಲೀಸ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗಿದೆ. ಭಟ್ಕಳ ಕಂಟೇನ್ಮೆಂಟ್ ವಲಯದಲ್ಲಿ ತೀರ ತೊಂದರೆ ಇರುವ ಪ್ರದೇಶ ನೋಡಿ ಅಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.