ಭಟ್ಕಳ ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ನಿರ್ಧಾರ

tmc-bhatkal
Published on

ಭಟ್ಕಳ/ಕಾರವಾರ: ಭಟ್ಕಳ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ವೈದ್ಯ ತಿಳಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅವರು ಗುರುವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಹೆಬಳೆ ಗ್ರಾಮ ಪಂಚಾಯಿತಿ, ಜಾಲಿ ಪಟ್ಟಣ ಪಂಚಾಯಿತಿಯನ್ನು ಸೇರಿಸಿ ಭಟ್ಕಳ ನಗರಸಭೆಯನ್ನು ರಚನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.

ನಾಲ್ಕನೇ ನಗರಸಭೆ:

ಕಾರವಾರ, ಶಿರಸಿ ಹಾಗೂ ದಾಂಡೇಲಿ ನಗರಸಭೆಗಳಿವೆ. ಭಟ್ಕಳ ಈಗ ಜಿಲ್ಲೆಯ ನಾಲ್ಕನೇ ನಗರಸಭೆಯಾಗಲಿದೆ. ಭಟ್ಕಳ ಪುರಸಭೆ ಒಂದನ್ನೇ ಮೇಲ್ದರ್ಜೆಗೇರಿಸಲು ಜನಸಂಖ್ಯೆ ಸಾಲದು ಇದರಿಂದ ಪಕ್ಕದ ಜಾಲಿ ಪಟ್ಟಣ ಪಂಚಾಯಿತಿ ಹಾಗೂ ಹೆಬಳೆ ಗ್ರಾಮ ಪಂಚಾಯಿತಿಯನ್ನು ಈ ವ್ಯಾಪ್ತಿಗೆ ಸೇರಿಸಲಾಗಿದೆ.

2011 ರ ಜನಗಣತಿಯಂತೆ ಭಟ್ಕಳ ಪುರಸಭೆಯ ವ್ಯಾಪ್ತಿಯ ಜನಸಂಖ್ಯೆ 32 ಸಾವಿರದಷ್ಟಿದೆ. ಜಾಲಿ ಪಟ್ಟಣ ಪಂಚಾಯಿತಿ 21 ಸಾವಿರ , ಹಾಗೂ ಹೆಬಳೆ ಗ್ರಾಮ ಪಂಚಾಯಿತಿ 12,800 ಜನಸಂಖ್ಯೆಯನ್ನು ಹೊಂದಿವೆ. ಒಟ್ಟಾರೆ ಎಲ್ಲ ಸೇರಿಸಿ 65,800 ಜನಸಂಖ್ಯೆಯಾಗಲಿದೆ. ಈಗಿನ ಅಂದಾಜು ಜನಸಂಖ್ಯೆ 79 ಸಾವಿರ ಆಗಲಿದೆ. ಹಾಲಿ 5.23 ಚದರ ಕಿಮೀ ವ್ಯಾಪ್ತಿಯನ್ನು ಭಟ್ಕಳ ಪುರಸಭೆ ಹೊಂದಿದೆ. ಹೆಬಳೆ ಹಾಗೂ ಜಾಲಿ ಸೇರಿಸಿ ಸುಮಾರು 12 ಕಿಮೀಗಿಂತ ಹೆಚ್ಚು ವ್ಯಾಪ್ತಿಯಾಗುವ ಸಾಧ್ಯತೆ ಇದೆ. ಸದ್ಯ ಭಟ್ಕಳ ಪುರಸಭೆಯಲ್ಲಿ 23 ಸದಸ್ಯ ಬಲವಿದ್ದು, ನಗರಸಭೆಯಾದರೆ ಸದಸ್ಯರ ಸಂಖ್ಯೆ 31 ಕ್ಕೆ ಹೆಚ್ಚಲಿದೆ.

ಕಸದ ಸಮಸ್ಯೆಗೆ ಪರಿಹಾರ:

ಭಟ್ಕಳ ಪುರಸಭೆಯ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿತ್ತು. ಅಲ್ಲದೇ ಒಳಚರಂಡಿ ಸಮಸ್ಯೆ, ರಸ್ತೆಯಲ್ಲಿ ನೀರು ತುಂಬುವುದು ಸೇರಿ ವಿವಿಧ ಸಮಸ್ಯೆಗಳು ಭಟ್ಕಳ ಪುರಸಭೆಯನ್ನು ಕಾಡುತ್ತಿದೆ. ನಗರಸಭೆ ಇದ್ದರೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಬಹುದು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಬಹುದು ಎಂಬ ಉದ್ದೇಶದಿಂದ ನಾಲ್ಕು ತಿಂಗಳ ಹಿಂದೆ ಮಂಕಾಳ ವೈದ್ಯ ಅಽಕಾರಿಗಳಿಗೆ ಸೂಚನೆ ನೀಡಿ ಪ್ರಸ್ತಾವನೆ ಸಿದ್ಧಪಡಿಸಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net