ಭಟ್ಕಳದಲ್ಲಿ ಧರೆಗುರುಳಿದ ಅಶ್ವತ್ಥ ಮರ

28-BKL- RAIN
Published on

ಭಟ್ಕಳ: ಬುಧವಾರ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಮಣ್ಕುಳಿಯಲ್ಲಿರುವ ಬೃಹತ್ ಅಶ್ವತ್ಥ ಮರವೊಂದು ತುಂಡಾಗಿ ಮುಖ್ಯ ರಸ್ತೆಯಲ್ಲಿ ಮುರಿದು ಬಿದ್ದಿದ್ದು, ಸಂಭಾವ್ಯ ಅನಾಹುತ ತಪ್ಪಿದೆ.
ಮಣ್ಕುಳಿ ಹನುಮಂತ ದೇವಸ್ಥಾನ ಎದುರಿನಲ್ಲಿರುವ ಪುರಾತನ ಆಶ್ವತ್ಥ ಮರದ ಬುಡದಲ್ಲಿ ಟೊಳ್ಳಾಗಿದ್ದ ಕಾರಣ ಬುಡಸಮೇತ ತುಂಡಾಗಿ ಬಿದ್ದಿದೆ. ಬೃಹದಾಕಾರದ ಮರ ನೇರವಾಗಿ ರಸ್ತೆಗೆ ಬೀಳದೆ ಪಕ್ಕದಲ್ಲಿದ್ದ ಮನೆಯ ಸ್ಲಾೃಬಿಗೆ ಒರಗಿ ರಸ್ತೆಗೆ ಸಂಪೂರ್ಣ ಚಾಚಿಕೊಂಡು ಬಿದ್ದಿತ್ತು. ಪಿಲ್ಲರ್ ನಿರ್ಮಿತ ಮನೆಯಾದ ಕಾರಣ ದೊಡ್ಡ ಮರ ಬಿದ್ದರೂ ಮನೆ ಕುಸಿದು ಬೀಳಲಿಲ್ಲ. ಒಂದೊಮ್ಮೆ ಮನೆ ಕುಸಿದು ಬಿದಿದ್ದರೆ ಮನೆ ಹಾಗೂ ಪಕ್ಕದ ಕ್ಯಾಂಟಿನ್‌ಲ್ಲಿದ್ದವರಿಗೆ ಜೀವ ಹಾನಿ ಆಗುವ ಸಂಭವವಿತ್ತು. ಮರ ಬಿದ್ದ ರಭಸಕ್ಕೆ 2 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದು, ತಂತಿಗಳು ತುಂಡಾಗಿವೆ. ಮರ ಬೀಳುವ ವೇಳೆ ವಿದ್ಯುತ್ ಸಂಪರ್ಕ ಇರಲಿಲ್ಲ. ಹೀಗಾಗಿ, ಭಾರಿ ವಿದ್ಯುತ್ ಅನಾಹುತ ತಪ್ಪಿದೆ. ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಸುರೇಶ ಸ್ಥಳಕ್ಕೆ ಧಾವಿಸಿ ಮರ ಸ್ಥಳಾಂತರ ಕಾರ್ಯಕ್ಕೆ ಸಹಕರಿಸಿದರು. ಕ್ರೇನ್ ಹಾಗೂ ಮರ ಕಟರ್‌ಗಳನ್ನು ತರಿಸಿ ರಸ್ತೆ ತೆರವು ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net