

ಭಟ್ಕಳ: ಪಟ್ಟಣದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುರ್ಡೇಶ್ವರ ಬಸ್ ನಿಲ್ದಾಣದಲ್ಲಿ ಸ್ಥಳೀಯ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ ಸಹಸ್ರಾರು ಪ್ರಯಾಣಿಕರು ಸಂಚರಿಸುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿಯುವ ಶುದ್ದ ನೀರಿನ ಘಟಕ ಅಳವಡಿಸಲಾಗಿತ್ತು. ಆದರೆ, ಅದು ಹಾಳಾಗಿ ವರ್ಷಗಳೇ ಕಳೆದರೂ ಇನ್ನೂ ದುರಸ್ತಿ ಭಾಗ್ಯ ಕಂಡಿಲ್ಲ. ಹೀಗಾಗಿ, ಪ್ರಯಾಣಿಕರು ಕುಡಿಯುವ ನೀರಿಗಾಗಿ ಅಲೆದಡುವಂತಾಗಿದೆ. ಇಲ್ಲವೇ ಹಣ ನೀಡಿ ನೀರಿನ ಬಾಟಲಿ ಖರೀದಿಸುವ ಸ್ಥಿತಿ ಎದುರಾಗಿದೆ. ಇತ್ತೀಚೆಗೆ ಯಾತ್ರಾರ್ಥಿಗಳ ಪ್ರಮಾಣ ಹೆಚ್ಚಾಗಿದೆ. ಇಲ್ಲಿಗೆ ಬಂದ ಪ್ರವಾಸಿಗರು, ವಾಕರಸಾ ಸಂಸ್ಥೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಕೂಡಲೇ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸಬೇಕು. ಪ್ರಯಾಣಿಕರಿಗೆ ಶುದ್ಧ ಕುಡಿಉವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ಮುಖಂಡ ಎಸ್.ಎಸ್. ಕಾಮತ ಹಾಗೂ ಪ್ರಯಾಣಿಕ ರವಿ ಹಿರೇಮಠ ಆಗ್ರಹಿಸಿದ್ದಾರೆ.